ಗ್ರಾಮೀಣರಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಇನ್ನೂ ಜೀವಂತ -ರಂಗ ಕಲಾವಿದ ಪುರುಷೋತ್ತಮ‌ ಹಂದ್ಯಾಳ್

ಬಳ್ಳಾರಿ, ಆ.7:  ಅಂತರಂಗದ ಭಾವನೆಗಳಿಗೆ ಅಕ್ಷರ ರೂಪ ನೀಡುವದೇ ಸಾಹಿತ್ಯವೆಂದು ಖ್ಯಾತ ರಂಗಕಲಾವಿದ ಪುರುಷೋತ್ತಮ ಹಂದ್ಯಾಳು ಅಭಿಪ್ರಾಯಪಟ್ಟರು.

ಕ.ಸಾ.ಪ. ಬಳ್ಳಾರಿ ಗ್ರಾಮೀಣ ಘಟಕವು ಅಲ್ಲಿಪುರದಲ್ಲಿರುವ ಡಾ.‌ ಎ.ಪಿ.ಜೆ. ಅಬ್ದುಲ್ ಕಲಾಂ ಪದವಿಪೂರ್ವ ವಸತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪಂಡಿತ ಟಿ.ಎಂ. ಬಸವರಾಜ ಶಾಸ್ತ್ರಿಗಳ ದತ್ತಿ, ಕಪ್ಪಗಲ್ಲು ನಬೀಸಾಬ್ ಮತ್ತು ಶ್ರೀಮತಿ ಹೊನ್ನುರಮ್ಮ ದತ್ತಿ, ಶ್ರೀಮತಿ ಗುರ್ರಂ ಸಾಕಮ್ಮ ರಾಮಯ್ಯ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.                                        ಗ್ರಾಮೀಣ ಪ್ರದೇಶದ ಜನತೆಯಿಂದಾಗಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಇನ್ನೂ ಜೀವಂತವಾಗಿ ಉಳಿದಿದೆ‌. ಅನಕ್ಷರಸ್ಥರು ಸಹ ನಾಟಕ ಮತ್ತು ಬಯಲಾಟಗಳ ಮೂಲಕ ತಮ್ಮ ಬದುಕನ್ನು ತಿದ್ದಿಕೊಂಡು ನೈತಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಿರುವ ಉದಾಹರಣೆಯನ್ನು ಕಾಣುತ್ತೇವೆ ಎಂದು ತಿಳಿಸಿದರು.

ಕವಿ ಸರ್ವಜ್ಞನ ವಚನಗಳು ನಮ್ಮ ನಾಡಿನ ಬೌದ್ಧಿಕ ಸಂಪತ್ತುಗಳಾಗಿವೆ.‌ ಸರ್ವಜ್ಞ ಎಲ್ಲರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವಾಗಿ ತ್ರಿಪದಿ ಸಾರ್ವಭೌಮನಾಗಿದ್ದಾನೆ ಎಂದು ವೀರಶೈವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಭ್ರಮಾರಂಭ ಯಾಟಿ ವಿಶೇಷ ಉಪನ್ಯಾಸದಲ್ಲಿ ವಿವರಿಸಿದರು.
ರಂಗ ನಿರ್ದೇಶಕರಾದ ಹೆಚ್. ತಿಪ್ಪೇಸ್ವಾಮಿ ಅವರನ್ನು ಪರಿಷತ್ತಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಂ.ಪಿ.ಜೆ. ಅಬ್ದುಲ್ ಕಲಾಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗಯ್ಯ ಹಿರೇಮಠ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಕಾಲೇಜಿನಲ್ಲಿ ಕವಿ ಸರ್ವಜ್ಞನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಪರಿಷತ್ತು ಹಮ್ಮಿಕೊಳ್ಳುವ ಸಾಹಿತ್ಯ ಚಟುವಟಿಕೆಗಳಗೆ ಸಹಕಾರ ನೀಡುವುದಾಗಿ ತಿಳಿಸಿದರು.


ದತ್ತಿ ದಾನಿಗಳಾದ ಕಪ್ಪಗಲ್ಲು ರಸೂಲ್ ಸಾಬ್, ವಕೀಲ ಮುಸ್ತಫಾ, ಕಸಾಪ ಜಿಲ್ಲಾ ಘಟಕ ದ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ,   ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ಧರಾಮಪ್ಪ ವೇದಿಕೆಯಲ್ಲಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ನಾಗರಾಜ ಯು  ಸ್ವಾಗತಿಸಿ ನಿರೂಪಿಸಿದರು.

 

Leave a Reply

Your email address will not be published. Required fields are marked *