ಕೌಶಲ್ಯಗಳು ವೃತ್ತಿ ಜೀವನದ ಯಶಸ್ಸಿಗೆ ಸಹಕಾರಿ: ಸಹ ಪ್ರಾಧ್ಯಾಪಕಿ ರೇಖಾ.ಬಿ.ವಿ ಕಿವಿಮಾತು

ಹರಿಹರ: ಉದ್ಯೋಗಾರ್ಹತಾ ಕೌಶಲ್ಯಗಳು ವೃತ್ತಿ ಜೀವನದ ಯಶಸ್ಸಿಗೆ ಸಹಕಾರಿಯಾಗಲಿದ್ದು, ಪ್ರಭಾವಶಾಲಿ ಉದ್ಯೋಗಿಯನ್ನಾಗಿಸಲು ಸಹಾಯ ಮಾಡುತ್ತವೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ರೇಖಾ.ಬಿ.ವಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ, ‘Wellbeing and Employability Skills’ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯೋಗಿಯ ವ್ಯಕ್ತಿತ್ವ ಮತ್ತು ವೃತ್ತಿಪರ ಕೌಶಲ್ಯಗಳನ್ನು ಪರಿಗಣಿಸಿಯೇ ಸಂಸ್ಥೆಗಳು ಉದ್ಯೋಗ ಅವಕಾಶಗಳನ್ನು ಒದಗಿಸುತ್ತವೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಶುಕುಂತಲಾ ಅವರು ಮಾತನಾಡಿ, ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳು ವೃತ್ತಿ ಆಧಾರಿತ ಕೌಶಲ್ಯಗಳನ್ನು ಶಿಕ್ಷಣದ ಜೊತೆಗೆ ಪಡೆಯಬೇಕು. ಅದರೊಂದಿಗೆ ಶಿಸ್ತುಬದ್ಧ ನಡವಳಿಕೆ ಬೆಳೆಸಿಕೊಳ್ಳಬೇಕು. ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಬಾಬು.ಕೆ.ಎ, ಸಹಾಯಕ ಪ್ರಾಧ್ಯಾಪಕರಾದ ಯೋಗೇಶ್.ಕೆ.ಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಉಪನ್ಯಾಸಕರುಗಳಾದ ಕಲ್ಲೇಶ್, ಶ್ವೇತಾ ಜಂಬಿಗೆ ಅವರು ಉಪಸ್ಥಿತರಿದ್ದರು. ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಯಶೋಧಾ.ಆರ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಬಿ.ಕಾಂ ವಿದ್ಯಾರ್ಥಿನಿ ರೇಖಾ.ಪಿ.ಬಿ ಪ್ರಾರ್ಥಿಸಿದರು.

Leave a Reply

Your email address will not be published. Required fields are marked *