
ಬೆಂಗಳೂರು: ಶಿಕ್ಷಣದ ಜೊತೆಗೆ ಸಂಸ್ಕಾರ ಸಮಾನತೆ ಸಹಬಾಳ್ವೆಯ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಲೊಯೋಲ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ರವಿಕುಮಾರ್ ಪಿ.ಜಿ ಅವರು ತಿಳಿಸಿದರು.
ನಗರದ ಹೆಚ್.ಕೆ.ಬಿ.ಕೆ ಸಮೂಹ ಶಿಕ್ಷಣ ಸಂಸ್ಥೆಗಳ ಸಮನ್ವಯ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಡಿಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸರಣಿ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ‘ವಚನ ಮತ್ತು ಸೂಫಿ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ವಿಷಯ ಕುರಿತು ಮಾತನಾಡಿದರು.
ವಚನ ಮತ್ತು ಸೂಫಿ ಸಾಹಿತ್ಯ ಪ್ರಕಾರಗಳು ವೈಶಿಷ್ಟ್ಯಪೂರ್ಣವಾಗಿವೆ. ವಚನಕಾರರು ಮತ್ತು ಸೂಫಿಗಳು ಸರ್ವಧರ್ಮ, ಸಾಮಾಜಿಕ ಸಾಮರಸ್ಯ, ಜೀವನ ಮತ್ತು ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆ. ವಚನ ಮತ್ತು ಸೂಫಿ ಸಾಹಿತ್ಯದಲ್ಲಿ ವ್ಯಕ್ತವಾಗಿರುವ ವಿಚಾರಗಳನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಮ್ಮದ್ ರಿಯಾಝ್ ಅಹ್ಮದ್ ಮಾತನಾಡಿ,
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಈ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ. ಜೀವನದಲ್ಲಿ ಸರಿ ತಪ್ಪು ಯಾವುದು ಎಂದು ಅರ್ಥ ಮಾಡಿಕೊಳ್ಳಲು ಇಂಥ ಕಾರ್ಯಕ್ರಮಗಳು ಉಪಯುಕ್ತ. ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಹರಿಶ್ಚಂದ್ರ ಎಸ್.ಬಿ. ಅವರು ಮಾತನಾಡಿ, ಸಾಮಾಜಿಕ ಸಾಮರಸ್ಯಕ್ಕೆ ನಮ್ಮ ನಾಡು ಹೆಸರುವಾಸಿಯಾಗಿದೆ. ಈ ನೆಲದ ವಚನ ಮತ್ತು ಸೂಫಿ ಪಂಥಗಳ ತಾತ್ವಿಕ ವಿಚಾರಗಳನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಸಂಚಾಲಕ ಡಾ. ಸಂಗಮೇಶ ಎಸ್. ಗಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಪವನ್ ಎನ್ ನಿರೂಪಿಸಿದರು.
ಡಾ. ಸಂತೋಷ ಪಿ, ಡಾ. ಶಿಲ್ಪಾ, ಡಾ. ಲಿಲ್ಲಿ ಥಾಮಸ್, ಡಾ. ಸೈಯದ್ ಮುಸ್ತಾಫ್ ಮೊದಲಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಎಲ್ಲ ಅಂಗಸಂಸ್ಥೆಗಳ ಪ್ರಾಂಶುಪಾಲರು, ಡೀನರು, ಮುಖ್ಯಸ್ಥರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.
