ಕಾರಣವಿಲ್ಲದೇ ರಚ್ಚೆ ಹಿಡಿದು
ಸಿಡುಕಾಡುವವಳಿಗೆ
ಬೇಕಿರುವುದು ಸಾಂಗತ್ಯ, ಮೌನವಷ್ಟೇ..
ಅಕಾರಣದ ಪ್ರೇಮಿಯೊಬ್ಬ
ಸಿಕ್ಕಿದ್ದಾನೆ, ದಕ್ಕಿಸಿಕೊಳ್ಳಬೇಕಿದೆ ಇನ್ನೂ..
ಹಗಲ ಹೆರಳಲ್ಲಿ ಮಲ್ಲಿಗೆಯಾದ ಇರುಳ
ಘಮ ಪಸರಿಸುವಷ್ಟೇ ಸಲೀಸಾಗಿ
ಹಿಡಿದಿದ್ದಾನೆ ಆಕೆಯ ನಾಡಿ ಮಿಡಿತ..
ಮಾತನಾಡುವ ಮುನ್ನ ಅರಿತಿದ್ದಾನೆ
ಇರುವ ಕಾರಣಗಳನ್ನು ಆಕೆ
ನಿರ್ಲಕ್ಷಿಸುವುದನ್ನೂ.
ಕಾರಣವೇ ಇಲ್ಲದೆ ಆಕೆ
ಸಿಡಿಮಿಡಿಯಾಗುವುದನ್ನೂ..
ಮುದ್ದಿಸಬಹುದೇನೋ
ಆಕೆಯ ಹಟಕ್ಕೆ.. ಮೊಟಕುವ ಬದಲು.
ಮಾತನಾಡುತ್ತಾನೆ, ಅಲೆಗಳ ಹಾಗೆ.
ಕೇಳುತ್ತಾನೆ, ದಡದ ಹಾಗೆ..
ಏರಿಳಿತದ ಉಸಿರಾಟಕ್ಕೊಂದಿಷ್ಟು
ಲಯ, ಗತಿಯಂತೂ ಸಿಕ್ಕಿದೆ..
ದಕ್ಕಿಸಿಕೊಳ್ಳುವುದಷ್ಟೇ ಬಾಕಿ..

-ಸಮುದ್ಯತಾ ಕಂಜರ್ಪಣೆ, ಬೆಂಗಳೂರು
