
ಬೆಂಗಳೂರು, ಸೆ.12: ಕನ್ನಡದ ಪ್ರಸಿದ್ಧ ರಂಗ ನಿರ್ದೇಶಕ, ರಂಗಶಿಕ್ಷಕ ಹಾಗೂ ರಂಗಚಿಂತಕ ಚಿದಂಬರರಾವ್ ಜಂಬೆ (77) ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಹೆಗ್ಗೋಡು–ನೀನಾಸಂನ ಸಾಂಸ್ಕೃತಿಕ ವಲಯದ ಮೂಲಕ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಜಂಬೆ ಅವರು, ರಂಗಶಿಕ್ಷಣ, ನಿರ್ದೇಶನ ಹಾಗೂ ರಂಗಚಿಂತನೆಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ನಿಧನದಿಂದ ಕನ್ನಡ ರಂಗಭೂಮಿ ಹಿರಿಯ ರಂಗಗುರುವೊಬ್ಬರನ್ನು ಕಳೆದುಕೊಂಡಂತಾಗಿದೆ.
ಹಾಸನದಲ್ಲಿ ರಂಗಸಿರಿ ತಂಡದ ಮೂಲಕ ಪತ್ರಕರ್ತರನ್ನು ರಂಗಭೂಮಿಗೆ ಬರುವಂತೆ ಪ್ರೋತ್ಸಾಹಿಸಿ ಮೈಸೂರು ರಂಗಾಯಣ ಮೂಲಕ ಹಲವು ಕಾರ್ಯಕ್ರಮದ ಬೆನ್ನೆಲುಬಾಗಿದ್ದನ್ನು ಮರೆಯುವಂತಿಲ್ಲ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೆನಪಿಸಿಕೊಂಡಿದ್ದಾರೆ.
ಜಂಬೆ ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖತಪ್ತ ಕುಟುಂಬದವರಿಗೆ ಹಾಗೂ ಕಲಾರಂಗದ ಬಂಧುಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
