ಹೆಸರಿನ ನಂಟು.‌ ಆಡದೇ ಉಳಿಸಿದ್ದು ನೂರೆಂಟು…! (ಹಿರಿಯನ್ಯಾಯವಾದಿ, ಸರಳ ಸಜ್ಜನಿಕೆಯ‌ ಎಂ‌ ಎಂ ಜೆ ಸ್ವರೂಪಾನಂದ ಅವರಿಗೆ ಅಕ್ಷರ ನಮನ) ಅಕ್ಷರ ನಮನ: ಸ್ವರೂಪ್ ಕೊಟ್ಟೂರು, ಲೇಖಕರು, ಕೊಟ್ಟೂರು

ಹೆಸರಿನ ನಂಟು.‌ ಆಡದೇ ಉಳಿಸಿದ್ದು ನೂರೆಂಟು…

ಪೊಲೀಸ್ ವೃತ್ತಿಗೆ ಸೇರುವ ಮುನ್ನ ನಾನು ಸಂಜೆವಾಣಿ, ಕರುನಾಡ ಸಂಜೆ ಪತ್ರಿಕೆಗಳಿಗೆ ಬಿಡಿ ವರದಿಗಾರ ಜತೆಜತೆಗೆ ವಿತರಕನಾಗಿದ್ದೆ.

2005 ರಲ್ಲಿ ಇಲಾಖೆಗೆ ಸೇರಿದ ನಂತರ ಹವ್ಯಾಸಿ ಬರಹಗಾರನಾಗಿ ನನ್ನ ಅಭಿರುಚಿಯನ್ನು ಮುಂದುವರೆಸಿದೆ. ನಾಡಿನ ಹೆಸರಾಂತ ವಿವಿಧ ದೈನಿಕಗಳಲ್ಲಿ ನನ್ನ ಹೆಸರಿನಲ್ಲಿ ವೈವಿಧ್ಯಮಯ ಬರಹ, ಚಿತ್ರ-ಲೇಖನಗಳು ಪ್ರಕಟಗೊಳ್ಳಲು ಆರಂಭಿಸಿದವು. ಬರವಣಿಗೆಯಲ್ಲಿ ಹೊಸ ಹುರುಪು ಬೇರೆ. ತುಸು ಹೆಚ್ಚೇ ಕಾಣಿಸಿಕೊಳ್ಳುತ್ತಿತ್ತು ಪತ್ರಿಕೆಗಳಲ್ಲಿ ನನ್ನ ಹೆಸರು ಆಗೆಲ್ಲ.

ಆಗ, ಈಗಿನಂತೆ ಸ್ವರೂಪ್ ಕೊಟ್ಟೂರು ಅಂತಾ short and sweet ಆಗಿ ಹೆಸರು ಪ್ರಕಟಗೊಳ್ಳುತ್ತಿರಲಿಲ್ಲ. ಸ್ವರೂಪಾನಂದ ಎಂ. ಕೊಟ್ಟೂರು, ಸ್ವರೂಪಾನಂದ ಕೊಟ್ಟೂರು ಹೀಗೆ… ನನ್ನ ಹೆಸರು ಅಚ್ಚಾಗುತ್ತಿತ್ತು.

ಪತ್ರಿಕೆಗಳಲ್ಲಿ ನನ್ನ ಬರಹ, ಚಿತ್ರ ಲೇಖನಗಳನ್ನು ಓದಿದವರಿಗೆಲ್ಲ ತತ್ ಕ್ಷಣಕ್ಕೆ ನೆನಪಾಗುತ್ತಿದ್ದದ್ದು ನಾನಲ್ಲ!. ಎಂ.ಎಂ.ಜೆ ಸ್ವರೂಪಾನಂದ ರವರು!.

ಓದುಗರಲ್ಲಿ ಅದರಲ್ಲೂ ವಿಶೇಷವಾಗಿ ನಮ್ಮ ಜಿಲ್ಲೆಯವರಲ್ಲಿ ‘ ವಕೀಲರು ಯಾವಾಗ ಬರಹಗಾರರಾದರು? ಎಂಬ ಪ್ರಶ್ನೆಗೆ ಹಾಗೆಯೇ ‘ಎಷ್ಟೊಂದು ಚಲೋ ಬರಿತಾರೆ!’ ಎಂಬ ಉದ್ಘಾರಕ್ಕೂ ಬರ ಇರಲಿಲ್ಲ. ಯಾಕೆಂದರೆ ಇವರದ್ದು ಆಗ ಬಹು ದೊಡ್ಡ ಹೆಸರು. ಮಾಜಿ ಸಚಿವರಾದ ದಿ. ಸದ್ಯೋಜಾತಪ್ಪನವರ ಹಿರಿಯ ಮಗ ಎಂಬ ಗುರುತಿನ ಆಚೆಗೂ ಬೆಳೆದು ನಿಂತವರು.ಸಹಕಾರಿ ಕ್ಷೇತ್ರದ ದಿಗ್ಗಜ, ಜನಪ್ರೀಯ ನ್ಯಾಯವಾದಿ, ಸರಳ ಸಜ್ಜನಿಕೆಯ‌ ವ್ಯಕ್ತಿ..‌ಹೀಗೆ ನಮ್ಮ ಭಾಗದಲ್ಲಿ ಹೆಸರಾದವರು. ಈ ಮುತ್ಸದ್ಧಿ ಇಂತಹ ಪ್ರಸಿದ್ಧಿಯ ಉತ್ತಂಗದಲ್ಲಿದ್ದ‌ ಕಾಲದಲ್ಲಿಯೇ ನನ್ನ ಬರವಣಿಗೆ ಕೃಷಿಯ ಶಿಶು ಪೈರಿನ ಆರಂಭದ ದಿನಗಳೂ.

ಸಹಜವಾಗಿ ಜನರಿಗೆ ಇದೊಂದು ಹೊಸ ಅಚ್ಚರಿ. ಈ ಕುತೂಹಲ ತಾಳಲಾರದೇ ಅವರಿಗೆ ಆನೇಕರು ಫೋನ್ ಮಾಡಿ ಕೇಳಿದ್ದೂ ಇದೆ. ಅಂತಹವರಲ್ಲಿ ಪ್ರಮುಖರೆಂದರೆ ಆಲೂರಿನ ಖ್ಯಾತ ಸಾಹಿತಿ, ನ್ಯಾಯಾಧೀಶರೂ ಆದ ದಿ. ಕೋ ಚೆನ್ನಬಸಪ್ಪನವರೂ ಸಹ ಒಬ್ಬರು!. ಇನ್ನೂ ಕೆಲವರು ಅವರ ಮನೆ ಬಾಗಿಲಿಗೆ ಅಭಿನಂದಿಸಲು ಹೋಗಿದ್ದು ಇದೆ. ಬರು ಬರುತ್ತಾ ನನ್ನ ಆರ್ಟಿಕಲ್ಸ್ ಗಳು ಅವರಿಗೆ ಇರಿಸುಮುರಿಸು ನೀಡಲು ಶುರು ಮಾಡಿದವು. ಕೇಳಿದವರಿಗೆಲ್ಲ ‘ ನಾನವನಲ್ಲ, ನಾನವನಲ್ಲ’ ಅಂದು ಅಂದು ಸಾಕಾಗಿ ಹೋಗಿತ್ತು ಅವರಿಗೆ.

ಇನ್ನು ಪತ್ರಿಕೆಗಳು ನನ್ನ ಹೆಸರಿಗೆ ಕಳುಹಿಸುತ್ತಿದ್ದ ಪೋಸ್ಟ್ ಗಳು ಫಸ್ಟ್ ಅವರ ಮನೆಗೇ ಹೋಗುತ್ತಿದ್ದವು. ಅಲ್ಲಿಂದ Re direct ಆಗಿ ನಮ್ಮ ಮನೆಗೆ ಬರುತ್ತಿದ್ದವು.

‘ಪಾಪ ಆ ಹುಡುಗ‌ ಪತ್ರಿಕೆಗಳಿಗೆ ಬರೆಯುತ್ತಾನೆ. ಹೆಸರು ನನಗೆ ಬರುತ್ತಿದೆ..’ ಹೀಗೆ ಆಪ್ತರ ಬಳಿ, ಮುಖ್ಯವಾಗಿ ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮಗಳಲ್ಲಿ ಖುದ್ದು ಹೇಳಿಕೊಂಡಿದ್ದಾರೆ ಕೂಡ.

ನಾನು ಅವರನ್ನು ಸಾಕಷ್ಟು ಬಾರಿ ನೋಡಿರುವೆ.‌ ಎಷ್ಟಾದರೂ ನಮ್ಮೂರಿನ‌ ದೊಡ್ಡ ಮನೆತನದವರು.‌ ಆದರೆ ನನ್ನನ್ನು ಅವರು ನೋಡಿರಲಿಲ್ಲ. (ಅಲ್ಲಲ್ಲಿ ಎದುರಾಗಿದ್ದರೂ ಗುರುತಿಸುವಷ್ಟು ದೊಡ್ಡವನೂ ಅಲ್ಲವಲ್ಲ).

ಏತನ್ಮಧ್ಯೆ, ಅವರಿಗೂ ನನ್ನ ಒಮ್ಮೆ ನೋಡಬೇಕು ಎಂಬ ಇಚ್ಛೆಯೂ ಆಯಿತು. ಒಮ್ಮೆ ‘ಸರ್ ನಿನ್ನನ್ನು ನೋಡಬೇಕಂತೆ’ ಅಂತಾ ಬುಲಾವ್ ಕೂಡ ಬಂತು. ಭೇಟಿಯೂ ಆದೆ. ‘ನೀನು ಬರೆಯುತ್ತಿಯಾ.. ಜನ ನನ್ನ ಕೇಳ್ತಾರೆ.. ಚಲೋ ಬರಿತಿಯಾ ಬರಿ.. ಬರಿ’ ಅಂತಾ ಬೆನ್ನು ಚಪ್ಪರಿಸಿದ್ದರು.‌ ಬರಹಗಳ ಪರಿಣಾಮಗಳ ವೃತ್ತಾಂತವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಅಂದು ಅವರ ಅಪಾರ ಪ್ರೀತಿ, ಪ್ರೋತ್ಸಾಹದ ನುಡಿಗಳಿಂದ ಅಕ್ಷರಶಃ ಮುದ್ದೆ ಆಗಿ ಹೋಗಿದ್ದೆ.

ಕಾಲ ಉರುಳಿದಂತೆ ಎಲ್ಲವೂ ಸರಿ ಹೋಗಿತು. ಅವರು ಎಂ‌ ಎಂ ಜೆ ಸ್ವರೂಪಾನಂದ, ನೀವು ಬರೀ ಎಂ ಸ್ವರೂಪಾನಂದ ಅಂತಾ ಓದುಗರೇ ಹೇಳುವಂತಾದರು. ಇದರಿಂದ ಲಾಯರ್ ಪೂರ್ಣ ನಿರಾಳರೂ ಆದರು.

ಆಮೇಲೆ ಆಮೇಲೆ ಇವರನ್ನು ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳು ಸೇರಿದಂತೆ ಬಹುತೇಕ ಕಡೆ ನೋಡಿದೆ.‌ ಮಾತನಾಡಿಸಿದ್ದು ಮಾತ್ರ ಅಪರೂಪ. ಪ್ರತಿ ಸಾರಿ ಸಂಕೋಚ ಅಡ್ಡ ಬರುತ್ತಿತ್ತು. ಅವರು ಬೀರುತ್ತಿದ್ದ‌ ನಗೆ ಶುಭಾಶೀರ್ವಾದದಂತೆ ಭಾಸವಾಗುತ್ತಿತ್ತು.

ನಮ್ಮೂರ ಧಣಿಗಳು ಹಾಗೆ ಇಬ್ಬರೂ ಒಂದೇ ಹೆಸರು ಉಳ್ಳವರು ಎಂಬ ಸೆಳೆತ ಅವರತ್ತ ಸದಾ ಬೆರಗು, ಗೌರವದಿಂದ ನೋಡುವಂತೆ ಮಾಡಿತ್ತು. ಅವರ ವಿಶಾಲ‌ ಹೃದಯ, ಮುಕ್ತ ಪ್ರಶಂಸೆ, ಸರಳತೆ.. ಎಲ್ಲವೂ‌ ನನ್ನ ಕಾಡುತ್ತಲೇ ಇದ್ದವು. ಅವರ‌‌ ಮೆಲು, ಮಿತ ಮಾತುಗಳು ಒಂದು ರೀತಿ ಬೂಸ್ಟ್ ತರಹ ಎನಗೆ.

‘ನನ್ನ ಅಲ್ಪ ಬರಹ ಕೃಷಿಯ ಸ್ಪೂರ್ತಿದಾತರಲ್ಲಿ ನೀವೂ ಕೂಡ ಒಬ್ಬರು. ನನ್ನ ಹೆಸರು ಕೇಳಿದಾಕ್ಷಣ‌ ಆನೇಕರು ನಿಮ್ಮನ್ನು ಹಾಗೆ ನಿಮ್ಮ ಸುಂದರ ವ್ಯಕ್ತಿತ್ವವನ್ನು ಸ್ಮರಿಸಿಕೊಳ್ಳುತ್ತಾರೆ…’ ಹೀಗೆ ಒಮ್ಮೆ ಮನಸ್ಸು‌ ಬಿಚ್ಚಿ, ಕಣ್ಣು ಮುಚ್ಚಿ ಹೇಳಬೇಕೆಂದುಕೊಳ್ಳುತ್ತಿದ್ದೆ ಒಳಗೊಳಗೇ ಅದೆಷ್ಟೋ ಬಾರಿ. ಆದರೆ ಆಡದೇ ಉಳಿದ ಮಾತುಗಳನ್ನು ಹಾಗೆ ನುಂಗಿಕೊಳ್ಳುವಂತೆ ಮಾಡಿ ಬಿಟ್ಟಿರಿ.. ಹೀಗೆ ದಿಢೀರ್ ಹೊರಟು ನಿಂತು…

ನಿಮ್ಮೊಂದಿಗಿನ ಹೆಸರಿನ‌ ನಂಟು ಹಾಗೆ ಉಳಿಸಿದೆ ಎದೆಯಲ್ಲಿ ನೂರೆಂಟನ್ನು.. ಹೋಗಿ ಬನ್ನಿ ಸರ್..ಆತ್ಮಕ್ಕೆ‌ ಚಿರ ಶಾಂತಿ‌ ಸಿಗಲಿ..

-ಸ್ವರೂಪ್ ಕೊಟ್ಟೂರು, ಲೇಖಕರು, ಕೊಟ್ಟೂರು

Leave a Reply

Your email address will not be published. Required fields are marked *