ಭದ್ರಾ ಕಾಲುವೆಗೆ ಬಾಗಿನ ಅರ್ಪಿಸಿದ ಶಿವಾನಂದ ತಗಡೂರು: ಹೊಳಲ್ಕೆರೆ ಸಮಗ್ರ ನೀರಾವರಿ ಯೋಜನೆಗೆ ಒತ್ತು ನೀಡುವ ವಿಶ್ವಾಸ

ಹೊಳಲ್ಕೆರೆ, ಸೆ.11: ಅರೆ ಮಲೆನಾಡು ಪ್ರದೇಶವಾದ ಹೊಳಲ್ಕೆರೆ ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಲು ಶಾಸಕ ಡಾ. ಎಂ. ಚಂದ್ರಪ್ಪ ಅವರು ಒತ್ತು ನೀಡಲಿದ್ದಾರೆ. ಈ ಕುರಿತು ಅವರೊಂದಿಗೆ ತಾವು ಕೂಡ ಚರ್ಚಿಸುವುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ತಾಲೂಕಿನ ಬೊಮ್ಮನಹಳ್ಳಿ ಬಳಿ ಭದ್ರಾ ಮೇಲ್ದಂಡೆ ಶಾಖಾ ಕಾಲುವೆಗೆ ಶುಕ್ರವಾರ ಬಾಗಿನ ಅರ್ಪಿಸಿ, ಜಕ್ಕನಹಳ್ಳಿ ಜಂಕ್ಷನ್‌ನ ತೊಟ್ಟಿ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಬಯಲುಸೀಮೆ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಹರಿಯುತ್ತಿರುವುದನ್ನು ನೋಡಿದಾಗ ತುಂಬಾ ಸಂತೋಷವಾಗುತ್ತಿದೆ. ನೀರು ಹರಿಯುವುದನ್ನು ಕಣ್ತುಂಬಿಕೊಳ್ಳಲು ಜನರು ಕುಟುಂಬ ಸಮೇತರಾಗಿ ಬರುತ್ತಿರುವುದು ಈ ಯೋಜನೆಯ ಮಹತ್ವವನ್ನು ತೋರಿಸುತ್ತದೆ ಎಂದರು.

ಚಿತ್ರದುರ್ಗ ಜಿಲ್ಲೆಗೆ ಭದ್ರಾ ಯೋಜನೆ ಜಾರಿಗೊಳಿಸುವುದು ದಶಕಗಳ ಕನಸಾಗಿತ್ತು. ನೀರಾವರಿ ಹೋರಾಟ ಸಮಿತಿ ರಚಿಸುವ ಮೂಲಕ ಈ ಹೋರಾಟಕ್ಕೆ ಮೊದಲ ಹೆಜ್ಜೆ ಇಟ್ಟವರು ಪತ್ರಕರ್ತರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ನಂತರ ರೈತ ಸಂಘಟನೆಗಳು, ರಾಜಕೀಯ ಮುತ್ಸದ್ದಿಗಳು ಹಾಗೂ ವಿವಿಧ ಸಂಘಟನೆಗಳು ಕೈಜೋಡಿಸಿ ನಡೆಸಿದ ಹೋರಾಟದ ಫಲವಾಗಿ ಇಂದು ಭದ್ರಾ ನೀರು ಜಿಲ್ಲೆಗೆ ಹರಿಯುವಂತಾಗಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.

ಸಮಗ್ರ ನೀರಾವರಿ ಯೋಜನೆಯ ಕೆಲವು ಅಂಶಗಳನ್ನು ಅವಲೋಕಿಸಿದಾಗ ಹೊಳಲ್ಕೆರೆ ತಾಲೂಕಿಗೆ ಒಂದಿಷ್ಟು ಅನ್ಯಾಯವಾಗಿರುವುದು ಕಂಡುಬರುತ್ತದೆ. ಸದ್ಯ ಹರಿಯುತ್ತಿರುವ ನೀರು ಪ್ರಾಯೋಗಿಕ ಹಂತದಲ್ಲಿದೆ. ಶಾಸಕ ಡಾ. ಎಂ. ಚಂದ್ರಪ್ಪ ಅವರು ಉತ್ಸಾಹಿ ಹಾಗೂ ರೈತರು ಮತ್ತು ಕ್ಷೇತ್ರದ ಜನರ ಹಿತ ಬಯಸುವವರಾಗಿದ್ದು, ಮುಂದಿನ ವರ್ಷ ಭದ್ರಾ ನೀರು ಹರಿಯುವಷ್ಟರಲ್ಲಿ ಹೊಳಲ್ಕೆರೆ ತಾಲೂಕನ್ನು ಸಮಗ್ರ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ವಿಶ್ವಾಸವಿದೆ ಎಂದರು.

ರೈತ ಮುಖಂಡ ಚನ್ನಸಮುದ್ರ ದಾನವೇಂದ್ರ ಮಾತನಾಡಿ, ಈ ಹಿಂದೆ ಕಾಲುವೆಗಳಲ್ಲಿ ನೀರು ಹರಿಯುವುದನ್ನು ನೋಡಲು ಶಿವಮೊಗ್ಗ, ಹರಿಹರ, ದಾವಣಗೆರೆ ಭಾಗಗಳಿಗೆ ತೆರಳುತ್ತಿದ್ದೆವು. ಈಗ ನಮ್ಮ ಊರಿನ ಬಳಿಯೇ ಕಾಲುವೆಯಲ್ಲಿ ನೀರು ಹರಿಯುತ್ತಿರುವುದನ್ನು ನೋಡಲು ಕುಟುಂಬ ಸಮೇತರಾಗಿ ಪ್ರತಿನಿತ್ಯ ಬರುತ್ತಿದ್ದೇವೆ. ಮುಂಜಾನೆಯಿಂದ ಸಂಜೆಯವರೆಗೂ ಇಲ್ಲಿಯೇ ಇರಬೇಕು ಎನ್ನಿಸುವಷ್ಟು ಸಂತಸವಾಗುತ್ತಿದೆ ಎಂದರು.

ನಿವೃತ್ತ ಸೈನಿಕ ಅರಭಘಟ್ಟ ಮಿಲಿಟರಿ ಮಲ್ಲೇಶ್ ಮಾತನಾಡಿ, ಎರಡು ದಶಕಗಳು ಕಳೆದರೂ ಭದ್ರಾ ಯೋಜನೆಯ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಮಳೆ ಕೊರತೆಯಿಂದ ಅಡಿಕೆ, ತೆಂಗು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಕಳೆದ ಐದು ವರ್ಷಗಳಿಂದ ತಾಲೂಕಿನ ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದರು. ಇದರಿಂದ ರೈತರೆಲ್ಲರೂ ಬೇಸರಗೊಂಡಿದ್ದರು. ಜಿಲ್ಲೆಗೆ ಭದ್ರಾ ನೀರು ಹರಿಯುವುದು ಕನಸಿನ ಮಾತು ಎಂಬ ಭಾವನೆಯಿತ್ತು. ಇದೀಗ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಭದ್ರಾ ನೀರು ಹರಿದಿರುವುದು ಅಪಾರ ಸಂತಸ ತಂದಿದೆ ಎಂದರು.

 

Leave a Reply

Your email address will not be published. Required fields are marked *