ರಂಗಾಯಣ, ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ಇವರ ಸಹಯೋಗದಲ್ಲಿ ರಂಗಾಯಣದ ರೆಪರ್ಟರಿ ಕಲಾವಿದರು ಶಾಂತರಸರ ಕಾದಂಬರಿ ಆಧಾರಿತ ‘ಸಣ್ಣಗೌಡಸಾನಿ’ ನಾಟಕವನ್ನು ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ (ಸೆ.12) ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದರು. 25ನೇ ಪ್ರದರ್ಶನದ ಸಂಭ್ರಮದಲ್ಲಿದ್ದ ಈ ನಾಟಕ ಪ್ರೇಕ್ಷಕರನ್ನು ಕಥೆಯ ಕಾಲ-ದೇಶದೊಳಗೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು.
ನಾಡೋಜ ಡಾ. ಶಾಂತರಸರ ಕಾದಂಬರಿಯ ಗ್ರಾಮೀಣ ಬದುಕು, ಮನುಷ್ಯ ಸಂಬಂಧಗಳು, ಸಾಮಾಜಿಕ ವ್ಯವಸ್ಥೆ, ಅಧಿಕಾರದ ಸ್ವರೂಪ ಹಾಗೂ ಬದುಕಿನ ಸಂಘರ್ಷಗಳನ್ನು ರಂಗಭಾಷೆಗೆ ಅಳವಡಿಸಿರುವ ‘ಸಣ್ಣಗೌಡಸಾನಿ’, ಕೇವಲ ಕಥೆಯನ್ನು ಹೇಳುವ ನಾಟಕವಾಗದೆ ಒಂದು ಕಾಲಘಟ್ಟದ ಸಾಮಾಜಿಕ ಬದುಕಿನ ಕನ್ನಡಿ ಎನಿಸುತ್ತದೆ. ಕಾದಂಬರಿಯ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ರಂಗರೂಪ ನೀಡಿರುವುದು ಇದರ ವಿಶೇಷ.
ಪಾತ್ರಗಳಿಗೆ ಜೀವ ತುಂಬಿದ ಕಲಾವಿದರು: ನಾಟಕದ ಪಾತ್ರಗಳು ಕೇವಲ ರಂಗದ ಮೇಲಿನ ವ್ಯಕ್ತಿಗಳಾಗಿ ಉಳಿಯದೆ, ತಮ್ಮದೇ ಆದ ಗುಣಸ್ವಭಾವ ಮತ್ತು ಭಾವಲೋಕದೊಂದಿಗೆ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಬರುತ್ತವೆ. ಮಹಾಂತೇಶ ರಾಜಕುಮಾರ ಅವರು ಗಂಗಪ್ಪನ ಪಾತ್ರದಲ್ಲಿ ಗಮನ ಸೆಳೆದರೆ, ಭಾಗ್ಯಶ್ರೀ ಬಿ. ಪಾಳಾ ಅವರ ಅಭಿನಯ ಪಾತ್ರದ ಸೂಕ್ಷ್ಮ ಭಾವನೆಗಳನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ. ಅಂಬರೇಶ ಪೂಜಾರಿ, ಅಭಿಷೇಕ ಎಸ್.ಕೆ., ವಾಣಿಶ್ರೀ ಬಿ. ಮಾಳಗಿ, ಮಹೇಶ್ ಕೆ., ಸಾಗರ ಫಾಲ್ಕನೋರ್, ಭೀಮಸಾಗರ, ಅಂಬಿಕಾ ಎಸ್. ತೇಲಗಿ, ರಾಜಕುಮಾರ ಎಸ್.ಕೆ. ಹಾಗೂ ಸಿದ್ಧಾರ್ಥ ಕಟ್ಟಿಮನಿ ಸೇರಿದಂತೆ ಕಲಾವಿದರು ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವಿಶೇಷವಾಗಿ ಮಹಿಳಾ ಪಾತ್ರಗಳ ಭಾವನಾತ್ಮಕ ತೀವ್ರತೆ, ಗ್ರಾಮೀಣ ಭಾಷೆಯ ಸೊಗಡು ಹಾಗೂ ಪುರುಷ ಪಾತ್ರಗಳ ಸಂಘರ್ಷಮಯ ಮನಸ್ಥಿತಿಯನ್ನು ಕಲಾವಿದರು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಸಂಭಾಷಣೆ, ದೇಹಭಾಷೆ, ಮುಖಭಾವ ಮತ್ತು ಧ್ವನಿಯ ಏರಿಳಿತಗಳು ಅಭಿನಯಕ್ಕೆ ಹೆಚ್ಚಿನ ಬಲ ನೀಡಿವೆ.
ನಿರ್ದೇಶನದಲ್ಲಿ ರಂಗದೃಷ್ಟಿ: ನಾಟಕದ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನವನ್ನು ಪ್ರವೀಣ್ ರೆಡ್ಡಿ ಗುಂಜಹಳ್ಳಿ ನಿರ್ವಹಿಸಿದ್ದಾರೆ. ಕಾದಂಬರಿಯ ವಿಶಾಲ ಕಥನವನ್ನು ರಂಗಕ್ಕೆ ತರುವ ಸಂದರ್ಭದಲ್ಲಿ ದೃಶ್ಯಗಳ ಸಂಯೋಜನೆ, ಪಾತ್ರಗಳ ಚಲನೆ ಮತ್ತು ಕಥೆಯ ವೇಗವನ್ನು ಸಮತೋಲನಗೊಳಿಸಿರುವುದು ನಿರ್ದೇಶನದ ಪ್ರಮುಖ ಸಾಧನೆ. ರಂಗರೂಪವನ್ನು ಮಹಾಂತೇಶ ನವಲಕಲ್ ರೂಪಿಸಿದ್ದು, ಮೂಲ ಸಾಹಿತ್ಯವನ್ನು ರಂಗಭಾಷೆಗೆ ಪರಿವರ್ತಿಸುವಲ್ಲಿ ಅವರ ಕೆಲಸ ಗಮನಾರ್ಹವಾಗಿದೆ.
ಸಂಗೀತ–ಬೆಳಕು -ರಂಗ ವಿನ್ಯಾಸ: ರಾಘವ ಕಮ್ಮಾರ ಅವರ ಸಂಗೀತ ನಿರ್ವಹಣೆ ನಾಟಕದ ಭಾವಲೋಕಕ್ಕೆ ಪೂರಕವಾಗಿದೆ. ದೃಶ್ಯಗಳ ಮನೋಧರ್ಮಕ್ಕೆ ಅನುಗುಣವಾಗಿ ಶಾತರಸರ ಗಜಲ್ ಗಳಿಗೆ ಸಂಗೀತದ ಸ್ಪರ್ಶ ನೀಡಿರುವುದರಿಂದ ಕಥನದ ಭಾವತೀವ್ರತೆ ಹೆಚ್ಚುತ್ತದೆ. ಶ್ರೀನಿವಾಸ ದೋರನಹಳ್ಳಿ ಅವರ ಬೆಳಕು ವಿನ್ಯಾಸ ಹಾಗೂ ಸಹ ನಿರ್ದೇಶನ ನಾಟಕದ ದೃಶ್ಯಗಳಿಗೆ ವಿಭಿನ್ನ ಆಯಾಮ ನೀಡಿದೆ. ಬೆಳಕು–ನೆರಳಿನ ವಿನ್ಯಾಸವು ಕೆಲ ದೃಶ್ಯಗಳಲ್ಲಿ ಪಾತ್ರಗಳ ಆಂತರಿಕ ಸಂಘರ್ಷವನ್ನೇ ದೃಶ್ಯರೂಪದಲ್ಲಿ ಅಭಿವ್ಯಕ್ತಿಸುತ್ತದೆ.
ರಂಗಸಜ್ಜಿಕೆ ಗಮನ ಸೆಳೆಯುತ್ತದೆ:
ಸರಳವಾದರೂ ಅರ್ಥಪೂರ್ಣ ರಂಗಸಜ್ಜಿಕೆ ನಾಟಕದ ಗ್ರಾಮೀಣ ವಾತಾವರಣವನ್ನು ಕಟ್ಟಿಕೊಡುತ್ತದೆ. ಮೆಟ್ಟಿಲುಗಳ ಬಳಕೆ, ಕನಿಷ್ಠ ರಂಗಪರಿಕರಗಳು, ವಸ್ತ್ರವಿನ್ಯಾಸ ಮತ್ತು ಬೆಳಕಿನ ಸಂಯೋಜನೆ ಸೇರಿ ಕಥೆ ನಡೆಯುವ ಪರಿಸರವನ್ನು ಪ್ರೇಕ್ಷಕರ ಕಲ್ಪನೆಯಲ್ಲಿ ಜೀವಂತಗೊಳಿಸುತ್ತವೆ. ನಾಟಕದ ರಂಗಸಜ್ಜಿಕೆ, ವಿನ್ಯಾಸ ಹಾಗೂ ತಾಂತ್ರಿಕ ವಿಭಾಗಗಳ ಸಮನ್ವಯ ಪ್ರದರ್ಶನದ ಯಶಸ್ಸಿಗೆ ಕಾರಣವಾಗಿದೆ.
ಕಾದಂಬರಿಯಿಂದ ರಂಗಕ್ಕೆ ಯಶಸ್ವಿ ಪಯಣ: ಶಾಂತರಸರ ಸಾಹಿತ್ಯದ ಜೀವಾಳವಾಗಿರುವ ಮನುಷ್ಯನ ಬದುಕಿನ ಸಂಕೀರ್ಣತೆ ಮತ್ತು ಸಾಮಾಜಿಕ ವಾಸ್ತವವನ್ನು ರಂಗದ ಮೇಲೆ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ಆದರೆ ‘ಸಣ್ಣಗೌಡಸಾನಿ’ಯಲ್ಲಿ ಸಾಹಿತ್ಯ, ಅಭಿನಯ, ನಿರ್ದೇಶನ, ಸಂಗೀತ, ಬೆಳಕು ಹಾಗೂ ರಂಗಸಜ್ಜಿಕೆ ಪರಸ್ಪರ ಪೂರಕವಾಗಿ ಬೆಸೆದುಕೊಂಡಿವೆ.
ಒಟ್ಟಿನಲ್ಲಿ ‘ಸಣ್ಣಗೌಡಸಾನಿ’ ಒಂದು ನಾಟಕವನ್ನು ನೋಡುವ ಅನುಭವಕ್ಕಿಂತ ಹೆಚ್ಚಾಗಿ, ಒಂದು ಕಾಲಘಟ್ಟದ ಬದುಕನ್ನು ಎದುರು ನಿಂತು ನೋಡುವ ಅನುಭವ ನೀಡುತ್ತದೆ. ಕಲಾವಿದರ ಸಮರ್ಥ ಅಭಿನಯ, ನಿರ್ದೇಶಕರ ರಂಗದೃಷ್ಟಿ, ಸಂಗೀತ–ಬೆಳಕಿನ ಪರಿಣಾಮಕಾರಿ ಬಳಕೆ ಮತ್ತು ಶಾಂತರಸರ ಸಾಹಿತ್ಯದ ಗಟ್ಟಿತನ ಸೇರಿ ಈ ನಾಟಕವನ್ನು ಗಮನಾರ್ಹ ರಂಗಕೃತಿಯನ್ನಾಗಿ ರೂಪಿಸಿವೆ. 25ನೇ ಪ್ರದರ್ಶನದ ಹಂತ ತಲುಪಿರುವುದು ಈ ರಂಗಪ್ರಯೋಗದ ಸ್ವೀಕಾರಾರ್ಹತೆಗೆ ಸಾಕ್ಷಿಯಾಗಿದೆ.
ಮುಗಿಸುವ ಮುನ್ನ:
ಪ್ರೇಕ್ಷಕರ ಕೊರತೆಯ ಮದ್ಯಯೂ ನಾಟಕ ಮುಡಿಯಷ್ಟಿರುವ ಪ್ರೇಕ್ಷಕರನ್ನು ತನ್ನ ವಜ್ರ ಮುಷ್ಟಿಯಲ್ಲಿ ಹಿಡಿದಿಟ್ಟಿತು. ಸ್ಪಾಟ್ ಲೈಟ್ ಬಳಕೆ ಮೇಕಪ್ ಇವುಗಳಲ್ಲಿ ಇನ್ನಷ್ಟು ಸುಧಾರಣೆ ಬೇಕೆನಿಸಿತು.

-ಎ.ಎಂ.ಪಿ ವೀರೇಶಸ್ವಾಮಿ, ಪ್ರಾಚಾರ್ಯರು, ರಂಗ ಕಲಾವಿದರು, ಲೇಖಕರು,
ಹೊಳಗುಂದಿ
