ಧಾರವಾಡ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರವತ್ತು ಮನೆಗಳಿರುವ ತಾಂಡ ಶಾಂತಿನಗರದ ಶೇಕ್ರಾ ನಾಯ್ಕ ಅವರಿಗೆ 2026ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಅವರ ‘ಹೊಸ್ತಿಲು ಸವರಿದ ಸೆರಗು’
ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ.
ವಿಮರ್ಶಕರಾದ ಪ್ರೊ. ಕೇಶವ ಶರ್ಮಾ ಹಾಗೂ
ಕವಿ ಪ್ರೊ. ಸುಕನ್ಯಾ ಮಾರುತಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.
ಹೊಸ ತಲೆಮಾರಿನ ಹೊಸ ಆಲೋಚನೆಗಳು, ಹೊಸ ರೀತಿಯ ಭಾಷೆ ಶೈಲಿ ಭಾವ ಸಮೃದ್ಧಿಯನ್ನು ಪರಿಚಯಿಸುವ ಈ ‘ಹೊಸ್ತಿಲು ಸವರಿದ ಸೆರಗು’ ನಮ್ಮ ಆಯ್ಕೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ.
ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ ಎಂದು ವಿಭಾಸಾಹಿತ್ಯ ಪ್ರಶಸ್ತಿಯ ಸಂಚಾಲಕರಾದ ಸುನಂದಾ ಮತ್ತು ಪ್ರಕಾಶ ಕಡಮೆ ತಿಳಿಸಿದ್ದಾರೆ.
೧೯೮೫ ರಲ್ಲಿ ಜನಿಸಿದ ಶೇಕ್ರಾನಾಯ್ಕ ಎಂ.ಎ ಇತಿಹಾಸ ಮತ್ತು ಇಂಗ್ಲಿಷ್ ವಿಷಯದಲ್ಲಿ ಪದವಿ ಪಡೆದ ಇವರು ಗಂಗಾವತಿ ತಾಲೂಕು ಚಳ್ಳೂರು ಕ್ಯಾಂಪಿನಲ್ಲಿ ಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಯುವಜನ ಮಹಿಳಾ ರೈತ ಕಾರ್ಮಿಕರ ಚಳುವಳಿಗಳಲ್ಲಿ ಭಾಗಿಯಾಗುತ್ತ ಬಂದ ಶೇಕ್ರಾನಾಯ್ಕ, ಕವಿತೆ,
ಕಥೆ, ಪ್ರಬಂಧ ಹಾಗೂ ಕಾದಂಬರಿಗಳ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ.
2026 ರ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಶೇಖರ ನಾಯ್ಕ್ ಮತ್ತು ಅಂತಿಮ ಸುತ್ತಿನ ತೀರ್ಪುಗಾರರಾದ ಡಾ. ಕೇಶವ ಶರ್ಮಾ ಮತ್ತು ಪ್ರೊ. ಸುಕನ್ಯ ಮಾರುತಿ ಅವರಿಗೆ ಜೊತೆಗೆ ವಿಭಾ ಸಾಹಿತ್ಯ ಪ್ರಶಸ್ತಿಗಾಗಿ ಹಸ್ತಪ್ರತಿ ಕಳಿಸಿದ ಎಲ್ಲ ಕವಿಗಳಿಗೆ, ಸಂಚಾಲಕರಾದ ಸುನಂದ ಮತ್ತು ಪ್ರಕಾಶ ಕಡಮೆ ಅವರಿಗೆ, ಈ ಎಲ್ಲ ಪ್ರಕ್ರಿಯೆಯಲ್ಲಿ ನೆರವಾದ ಎಲ್ಲರಿಗೂ ಕವಿ, ಹೋರಾಟಗಾರ ಲಡಾಯಿ ಬಸು ಅವರು ಕೃತಜ್ಞತೆ ಅರ್ಪಿಸಿದ್ದಾರೆ.
