ಸದಾ ಬಹಾರಿನ ಒಂದು ಗೀತೆ
ಮುಚ್ಚಿದ ಕಿಟಕಿಯ ಆಚೆ
ದಾಸವಾಳದ ಗಿಡ
ಗಾಳಿ ಗಂಧ ಎರಡೂ
ಇಲ್ಲದಿದ್ದರೂ ತೂಗುತ್ತಿದೆ
ಅದರ ದೇಟಿನ ತುದಿಗೆ ಒಂದು ಹೂ
ಐದು ಎಸಳಿನಲ್ಲಿ
ಒಂದು ಮುಕ್ಕು, ಇನ್ನೆರಡು ಪೇಲವ
ಮತ್ತೊಂದು
ಲಾರ್ವಾದ ಪಾಲಾಗಿ ಗೋಲ ಗೋಲ
ಪರಾಗ ಹೆಜ್ಜೆಯ ಇರುವೆ ಸಾಲು
ಸರಭರ ಸದ್ದು , ಪರಸ್ಪರ ಮುದ್ದು
ಸಿಕ್ಕ ಸವುಡಿನಲ್ಲೇ ಕೆಂಪು ಕವಿತೆ
ಬರೆದು ಬಿಸಾಡಿದ
ವ್ಯಭಿಚಾರಿ ಏರು ಬಿಸಿಲು
ರಸ್ತೆಯಾಚೆ ಹಾದ ಬಸ್ಸಿನಲ್ಲಿ
ನಮ್ಮ ಪ್ರವಾಸಕ್ಕೆ ಜಯವಾಗಲಿ ಎಂದು
ಕೂಗಿದವು ಸಣ್ಣ ಮಕ್ಕಳು
ಊರ ಕೊನೆಯ ಹನುಮನ ಮೂತಿ ತಿರುಗಿದ್ದು
ಮಸೀದಿಯ ಧ್ವನಿವರ್ಧಕ ಕೂಗಿದ್ದು
ಉಪ್ಪಿನಾಗರದಲ್ಲಿ ತಲೆಬಗ್ಗಿಸಿ ಕೊಟ್ಟೆ ತುಂಬುವ
ಪಾರ್ವತಿ.. ನಫೀಸಾ.. ಕಾಣಲಿಲ್ಲ ಕೇಳಲಿಲ್ಲ
ತಿಂಗಳಾದರೂ ಇನ್ನೂ ವೇತನವಿಲ್ಲ
ಹೊಟ್ಟೆಗೇನು ಬರೀ ಉಪ್ಪು
ತಿನ್ನಲಿಕ್ಕಾದೀತೇ..
ಬೋಟಿಗೆ ಹೋದ ಸಣ್ಣಭಾವ
ಉಗಾದಿ ದಿನ ಸುದ್ದಿ ತಿಳಿಸದೇ ಬಂದ
ತಂದ ಮೂರು ಮೂಟೆ ಒಣಮೀನು
ಊರಿನವರಿಗೆಲ್ಲ ಹಂಚಿದ
ಮೈ ಕೈಗೆಲ್ಲ ಕೊಬ್ಬರಿಎಣ್ಣೆ ಹಚ್ಚಿಕೊಂಡು
ಕೇರಿ ತುಂಬ ತಿರುಗಿದ
ಹಿಟ್ಟು ಮಾಡುವ ಮಿಲ್ಲಿನ ಶೆಟ್ಟರೊಂದಿಗೆ
ಮಾತಾಡಿ ಮಾತಾಡಿ ರಾತ್ರಿ ಬಂದು
ಹಿಟ್ಟುಕೊಡವಿ ತಲೆದೀಡಿ ಮಿಂದು
ನಾಳೆ ಮತ್ತೆ ಹೊರಟೆ ಎಂದ
ನೀನು ಹೋಗು ನಾವು ಬಂದೆವು
ಎಂದವರೆಲ್ಲ
ಲಂಗರು ಬಿಟ್ಟು ತೇಲುವ
ಮಚವೆಯ ಹತ್ತಿ ಕುಳಿತೇ ಇದ್ದರು
ತೂಗುವ ಮಡಲು ಕಂತುವ ಸೂರ್ಯ
ರಾತ್ರಿಯಾದದ್ದೇ ಆ ದಡದಿಂದ
ದೊಂದಿ ಹಿಲಾಲು.. ಕೂ ಆವಾಜು
ಲಾಟೀನು ಬೆಳಕಲ್ಲಿ ವಾಲಿಕೊಂಡು
ಬಂದವರೆಲ್ಲರೂ ಹತ್ತಿರದ ಸಂಬಂಧಿಕರು
ಸಣ್ಣ ಪಡವಿಯಲ್ಲಿ ಗಂಜಿ
ಮೀನಿನ ಚಟ್ನಿ ಉಂಡ ಅವರೆಲ್ಲ
ಕೈತೊಳೆಯಲು ಹೋದಾಗ
ಬಾಡಿದ ದಾಸವಾಳದ
ಪಕ್ಕ ತೂಗುವ ಹೊಸ ಮೊಗ್ಗು
ನೋಡಿ
ಸದಾ ಬಹಾರಿನ
ಒಂದು ಗೀತೆ ಗುನುಗಿಕೊಂಡರು
ಕಿಟಕಿಯ ಕದ ತೆರೆದಿಟ್ಟು
ಮೊಗ್ಗಿನ ಕಡೆ ಕಣ್ಣು ನೆಟ್ಟು
ಸಣ್ಣ ಮಕ್ಕಳಿಗೆ ಕಥೆ ಹೇಳುತ್ತ
ಮಲಗಿಕೊಂಡರು

-ರೇಣುಕಾ ರಮಾನಂದ, ಅಂಕೋಲ, ಉತ್ತರ ಕನ್ನಡ
