ಶಾಕ್ಯಮುನಿ ಬುದ್ಧರೆ – ಜ್ಞಾನದ ಬೆಳಕೇ
ಭೂಮಿಯ ಮಡಿಲಲಿ ಅರಳಿದ ಜ್ಞಾನದ ಬೆಳಕೇ,
ಜಗದ ಮೊದಲ ಸತ್ಯದ ದಾರಿಯ ತೋರಿದವನೇ!
ಶಾಕ್ಯಮುನಿ ಬುದ್ಧನೇ, ಕರುಣೆಯ ಕಡಲನೇ,
ನಿನ್ನ ಜ್ಞಾನವೇ ನಮ್ಮ ಬದುಕಿನ ದೀಪವೇ!
ನೀವಿಲ್ಲದ ಮನವಿಲ್ಲ, ನೀವಿಲ್ಲದ ತಾಣವಿಲ್ಲ,
ನಿನ್ನ ಬೋಧನೆಯ ಬೆಳಕಿಗೆ ಕೊನೆಯೆಂಬುದೇ ಇಲ್ಲ!
ನೀವೇ ಧರ್ಮದ ಮೂಲ, ನೀವೇ ಜ್ಞಾನದ ಸೆಲೆ,
ನೀವೇ ಮಾನವತೆಯ ಉಸಿರು, ಶಾಂತಿಯ ನೆಲೆ!
ವಿಜ್ಞಾನದ ಸಂಶೋಧನೆಗೆ ಚಿಂತನೆಯ ಪೂರಕ ನೀನು,
ವಿವೇಕದ ಬೆಳಕಿನಿಂದ ಅಜ್ಞಾನದ ಕಳೆಯುವವನು!
ಕಾಣದ ಬ್ರಹ್ಮಾಂಡದ ಭ್ರಮೆಯಲಿ ದೇವರ ಹುಡುಕಿದವರಿಗೆ,
ತಮ್ಮೊಳಗಿನ ಸತ್ಯವ ತೋರಿದ ಮಹಾ ಮಾರ್ಗದರ್ಶಿ ನೀನು!
ಆಸೆಗಳ ಅಗ್ನಿಯಲಿ ಬೆಂದು ಬೆವರಿದ ಮನಕೆ,
ಬಯಕೆಗಳ ಬಂಧನದಿಂದ ಮುಕ್ತಿಯ ದಾರಿ ತೋರಿದೆ!
ಯುದ್ಧಗಳ ಕಿಚ್ಚಿನಲ್ಲಿ ಬದುಕು ಕಳೆದುಕೊಂಡ ಜಗಕೆ,
ಶಾಂತಿಯ ಹೂವ ಅರಳಿಸಿ ಸುಂದರ ಬದುಕು ನೀಡಿದೆ!
ದ್ವೇಷದ ಗೋಡೆಗಳನು ಪ್ರೀತಿಯಿಂದ ಕೆಡವಿದೆ,
ಕರುಣೆಯ ಭಾಷೆಯಲಿ ಮನುಜರನು ಬೆಸೆದಿದೆ!
ಶತಮಾನಗಳು ಕಳೆದರೂ ನಿನ್ನ ಮಾತು ಅಮರ,
ಜೀವನದ ಉಸಿರಿನಲಿ ನಿನ್ನ ಧಮ್ಮವೇ ಸುಂದರ!
ನೊಂದವರ ಕಣ್ಣೀರಿನ ಭಾವನೆಗೆ ಆಸರೆಯಾಗಿ,
ಬೆಂದವರ ಹೃದಯದಲಿ ಭರವಸೆಯಾಗಿ ನಿಂತೆ!
ಶಾಂತಿ, ಸಂತೋಷ, ನೆಮ್ಮದಿಯ ಹಾದಿಯ ತೋರಿಸಿ,
ಮಾನವ ಬದುಕಿನ ಅರ್ಥವ ಜಗಕೆ ತಿಳಿಸಿದೆ!
ದೆವ್ವ, ಭೂತ, ಆತ್ಮಗಳ ಕಲ್ಪನೆಯಾಚೆ ನಿಂತು,
ಅನುಭವದ ಒರೆಗಲ್ಲಲಿ ಸತ್ಯವ ಪರೀಕ್ಷಿಸೆಂದೆ!
ಕಂಡು, ಕೇಳಿ, ಚಿಂತಿಸಿ, ಅರಿತು ನಂಬು ಎಂದೆ,
ವಿವೇಕದ ದೀಪವನು ಪ್ರತಿಯೊಬ್ಬರೊಳಗೆ ಹೊತ್ತಿಸಿದೆ!
ಬದುಕು ಅನಿರೀಕ್ಷಿತ, ಬದಲಾವಣೆಯೇ ನಿಯಮ,
ಕ್ಷಣಕ್ಷಣವೂ ಬದಲಾಗುವುದು ಜಗದ ಸ್ವಭಾವ!
ಶಾಶ್ವತವೆಂಬ ಭ್ರಮೆಯನು ಕಳಚಿ ತೋರಿಸಿದೆ,
ಅನಿತ್ಯತೆಯ ಸತ್ಯದಲಿ ಬದುಕಿನ ಅರ್ಥವ ತಿಳಿಸಿದೆ!
ನಿನ್ನನು ಅರಿತವರು ನಿನ್ನ ದಾರಿಯ ನಡೆಯುವರು,
ನಿನ್ನ ಧಮ್ಮದ ಬೆಳಕಿನಲಿ ತಮ್ಮ ಬದುಕ ಕಟ್ಟುವರು!
ಧ್ಯಾನಿಸುವ ಮನಗಳೆಲ್ಲ ವಿವೇಕದ ಹೂಗಳಾಗಲಿ,
ನಿನ್ನ ಕರುಣೆಯ ಸಂದೇಶ ಜಗದ ತುಂಬ ಹರಡಲಿ!
ನೀವೇ ಜಗತ್ತು, ಜಗದೊಳಗಿನ ಜ್ಞಾನದ ಬೆಳಕು,
ನಿನ್ನ ಧಮ್ಮವೇ ಮನುಜರ ಬದುಕಿನ ಸೊಬಗು!
ಶಾಕ್ಯಮುನಿ ಬುದ್ಧನೇ, ಕರುಣೆಯ ಕಡಲನೇ,
ನಿನ್ನ ಬೋಧನೆಯ ಹಾದಿಯಲಿ ನಡೆಯುವವರೆ ಧನ್ಯರು!
ಧನ್ಯ ಧನ್ಯ ಬುದ್ಧನೇ, ಜ್ಞಾನದ ಜ್ಯೋತಿಯೇ,
ಧಮ್ಮದ ಬೆಳಕೇ, ಶಾಂತಿಯ ಮೂರ್ತಿಯೇ!
ಕಾಲವನು ಮೀರಿದ ನಿನ್ನ ಬೋಧನೆ ಅಮರ,
ಲೋಕದ ಉಸಿರಿನಲಿ ನಿನ್ನ ಸಂದೇಶ ಚಿರನಿರಂತರ!
ಬುದ್ಧಂ ಶರಣಂ ಗಚ್ಛಾಮಿ…
ಧಮ್ಮಂ ಶರಣಂ ಗಚ್ಛಾಮಿ…
ಸಂಘಂ ಶರಣಂ ಗಚ್ಛಾಮಿ…

-ಸುನಿಲ್ ಕುಮಾರ್ ಎಸ್, ರಾಮನಗರ
