ಹಿರಿಯ ಪತ್ರಕರ್ತ ಸಾಹಿತಿ ಶೂದ್ರ ಶ್ರೀನಿವಾಸ್ ಅವರಿಗೆ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ

ಚಿತ್ರುದರ್ಗ/ಬೆಂಗಳೂರು: ಕೆಂಧೂಳಿ ಪತ್ರಿಕೆ ಕಳೆದ ವರ್ಷದಿಂದ ನೀಡುವ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಸಾಹಿತಿ ಹಾಗು ಪತ್ರಕರ್ತ ಶೂದ್ರ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿದೆ ಎಂದು ಸಂಪಾದಕ ಮಂಜುನಾಥ ತುರುವನೂರು ಅವರು ತಿಳಿಸಿದ್ದಾರೆ.

ಕೆಂಧೂಳಿ ವಾರಪತ್ರಿಕೆ ಐದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಿತ್ತು, ಅದರಂತೆ ಈ ಬಾರಿ ಪತ್ರಿಕೆ ಆರು ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿರಿಸಿದೆ. ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಸಾಹಿತ್ಯ, ಪತ್ರಿಕಾ, ಕೃಷಿ, ಸಮಾಜಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯರಿಗೆ ಈ ಪ್ರಶಸ್ತಿ ನೀಡಲು ಕೆಂಧೂಳಿ ಬಳಗ ತೀರ್ಮಾನಿಸಿದೆ. ಹೀಗಾಗಿ ಈ ಬಾರಿ ಪತ್ರಕರ್ತರು ಮತ್ತು ಸಾಹಿತಿಗಳು ಆದ ಶೂದ್ರ ಶ್ರೀನಿವಾಸ್ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಆಯ್ಕೆ ಸಮಿತಿ ಹರ್ಷಿಸಿದೆ.
ಕಳೆದ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಡಿನ ಖ್ಯಾತ ಸಾಹಿತಿ ಡಾ.ಬಿ.ಎಲ್.ವೇಣು ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು, ಈ ಪ್ರಶಸ್ತಿಯು ೧೦ ಸಾವಿರ ನಗದು, ಆಕರ್ಷಕ ಫಲಕ ಹೊಂದಿರುತ್ತದೆ. ಪ್ರಶಸ್ತಿ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಖ್ಯಾತ ಸಾಹಿತಿ ಡಾ.ಬಿ.ಎಲ್.ವೇಣು ಅವರ ಅಧ್ಯಕ್ಷತೆಯಲ್ಲಿ.ಸಾಹಿತಿ ಡಾ.ಶಿವಕುಮಾರ್ ಕಂಪ್ಲಿ, ಶ್ರೀದೇವಿ ಕೆರೆಮನೆ ಹಾಗೂ ಡಾ.ಗುರುದೇವ್ ಎಸ್‌ಎ. ಅವರನ್ನೊಳಗೊಂಡ ಸಮಿತಿಯು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಶೂದ್ರ ಶ್ರೀನಿವಾಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಮಂಜುನಾಥ ತುರುವನೂರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *