ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ವಿಶೇಷ ವೇದಿಕೆ

ಬಳ್ಳಾರಿ, ನ.22: ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು ಮತ್ತು ಬೆಳವಣಿಗೆಯ ಉದ್ದೇಶದಿಂದ ನಗರದ ‘ನಿಮಗಾಗಿ ನಾವು’ ಸಂಸ್ಥೆ ಆಯೋಜಿಸಿದ್ದ 6ನೇ ವರ್ಷದ ಕನ್ನಡ ಜಾತ್ರೆ ಶನಿವಾರ ಇಡೀದಿನ ಸಂಭ್ರಮದಿಂದ ನಡೆಯಿತು.
ನಗರದ ರೇಡಿಯೋ ಪಾರ್ಕ್ ಸಮೀಪದ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಆವರಣದಲ್ಲಿ ಮೇಯರ್ ಪಿ. ಗಾದೆಪ್ಪ ಅವರು ಕನ್ನಡ ಜಾತ್ರೆಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಯಲಾಟ ಕಲಾವಿದೆ ಹರಿಜನ ಓಂಕಾರಮ್ಮ ಹಾಗೂ ಮಾಜಿ ಶಾಸಕ ಹರಗಿನದೋಣಿ ಸಣ್ಣ ಬಸವನಗೌಡ ಅವರ ವಂಶಸ್ಥರು ಮತ್ತು ಉದ್ಯಮಿ ಮಹಾರುದ್ರ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದಿವಂಗತ ಗೋಡೆ ಶಿವರಾಜ್ ಅವರ ‘ನಂದನ ವನ’ ಕವನ ಸಂಕಲನವನ್ನು ಅವರ ಕುಟುಂಬಸ್ಥರು ಹಾಗೂ ಗಣ್ಯರು ಬಿಡುಗಡೆಗೊಳಿಸಿದರು.
ಕನ್ನಡ ಜಾತ್ರೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕನ್ನಡ ನಾಡಗೀತೆ ಗಾಯನ, ಕನ್ನಡ ಹಾಡುಗಳ ಗಾಯನ, ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ ಗುರೂಜಿ, ರಾಮಾಂಜಿನೇಯಲು ಪಿ.ಎಂ ಕಾರ್ಯನಿರ್ವಾಹಕ ಅಭಿಯಂತರರು, ವೈದ್ಯರಾದ ಡಾ. ದ್ರಾಕ್ಷಯಣಿ, ಕನ್ನಡ ಪರ ಹೋರಾಟಗಾರ ಸಿದ್ಮಲ್ ಮಂಜುನಾಥ್, ಜಾನಪದ ಗಾಯಕ ಯಲ್ಲನಗೌಡ ಶಂಕರಬಂಡೆ, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ಪ್ರಾಚಾರ್ಯರಾದ ದಿಲೀಪ್ ಕಾಂಬ್ಳೆ, ಆಧ್ಯಾತ್ಮ ಚಿಂತಕಶಿವಶಂಕರಯ್ಯ, ರೈತ ಹೋರಾಟಗಾರ ಶರಣಬಸಪ್ಪ, ನಿರಂಜನ.ಪಿ.ಎಂ ಇಂಜಿನಿಯರ್ ಹಾಗೂ ಸಿನಿಮಾ ನಟ-ನಿರ್ದೇಶಕ ಷಣ್ಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಕುಂ. ವೀರಭದ್ರಪ್ಪ ಅವರಿಗೆ ‘ಕನ್ನಡದ ಕಣ್ಮಣಿ’ ಪ್ರಶಸ್ತಿ ಹಾಗೂ ಹಿರಿಯ ರಂಗಕರ್ಮಿ ಪುರುಷೋತ್ತಮ ಹಂದ್ಯಾಳ್ ಅವರಿಗೆ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು ಹಾಗೂ ಸಮಾಜ ಸೇವಕರಾದ ಗೀತಾವೀರೇಶ್ ಅಧ್ಯಕ್ಷರು ಜೀವನ್ ಸಂಗೀತ ಮತ್ತು ಜೆ ಪಿ ಮಂಜುನಾಥ ರವರನ್ನು ಸನ್ಮಾನಿಸಲಾಯಿತು.
ಹತ್ತನೇ ತರಗತಿಯಲ್ಲಿ ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಬಿ. ಮಾರುತಿ ‘ಕನ್ನಡದ ಕೂಸು’ ಪ್ರಶಸ್ತಿ ನೀಡಿ ಗೌರವಿಸಿದರು.

ಕನ್ನಡ ನಾಡು-ನುಡಿ, ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮಹತ್ವ ಸಾರುವ ಮೂಲಕ ಕನ್ನಡಾಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಕನ್ನಡ ಜಾತ್ರೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ನಿರೂಪಣೆಯನ್ನು ಅಧ್ಯಾಪಕಿ ವೀಣಾ,ಶಾರದ, ಮಂಜುನಾಥ ಎಸ್ ಕೋಟಿ ನೆರವೇರಿಸಿದರು. *****
