
ಬಳ್ಳಾರಿ: ಪತ್ರಿಕೋದ್ಯಮದಲ್ಲಿ ಪದಗಳಿಗೆ ಎಷ್ಟು ಶಕ್ತಿಯಿದೆಯೋ, ಛಾಯಾಚಿತ್ರಗಳಿಗೂ ಅಷ್ಟೇ ಶಕ್ತಿಯಿದೆ. ಒಂದು ಉತ್ತಮ ಛಾಯಾಚಿತ್ರವು ಸಮಾಜದ ಕಣ್ಣನ್ನು ತೆರೆಸಬಲ್ಲದು ಎಂದು ನಗರದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುರುಷೋತ್ತಮ ಹಂದ್ಯಾಳು ಅವರು ಹೇಳಿದರು.
ಅವರು ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಶುಕ್ರವಾರ ಮಧ್ಯಾಹ್ನ ಆಯೋಜಿಸಿದ್ದ ‘ಪತ್ರಿಕೋದ್ಯಮದಲ್ಲಿ ಛಾಯಾಚಿತ್ರದ ಅಗತ್ಯತೆ ಮತ್ತು ಮಹತ್ವ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಚಿತ್ರಗಳು
ಆಡಳಿತದ ವೈಫಲ್ಯವನ್ನು ಎತ್ತಿತೋರಿಸಬಲ್ಲದು. ಸಂಕಷ್ಟದಲ್ಲಿರುವವರ ನೋವಿಗೆ ಧ್ವನಿಯಾಗಬಲ್ಲದು. ಸಾಧಕರ ಸಾಧನೆಯನ್ನು ಜಗತ್ತಿಗೆ ಪರಿಚಯಿಸಬಲ್ಲದು ಎಂದು ತಿಳಿಸಿದರು.

ಒಬ್ಬ ಪತ್ರಕರ್ತ ಘಟನೆ ನಡೆದ ನಂತರ ಅದರ ಬಗ್ಗೆ ಬರೆಯುತ್ತಾನೆ. ಆದರೆ ಒಬ್ಬ ನುರಿತ ಛಾಯಾಗ್ರಾಹಕ ಆ ಘಟನೆಯ ಮಹತ್ವದ ಕ್ಷಣವನ್ನೇ ಇತಿಹಾಸಕ್ಕಾಗಿ ದಾಖಲಿಸುತ್ತಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಯಾಮೆರಾದಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ಮೊದಲು ಛಾಯಾಗ್ರಾಹಕನ ಮನಸ್ಸಿನಲ್ಲಿ ಮೊದಲು ಆ ಚಿತ್ರದ ಕಲ್ಪನೆ ಮೂಡಬೇಕು. ಆಗ ಮಾತ್ರ ಮನಮುಟ್ಟುವ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯ ಎಂದರು.
ಪ್ರತಿಯೊಬ್ಬ ಛಾಯಾಗ್ರಾಹಕನಿಗೂ ಚಿತ್ರ ಸೆರೆಹಿಡಿಯುವ ಆಸಕ್ತಿ ಜತೆಗೆ ಸತ್ಯಶೋಧನೆ ಮಾಡುವ ಹಾಗೂ ಜನಮಾನಸಕ್ಕೆ ಹತ್ತಿರವಾಗುವ ಚಿತ್ರಗಳನ್ನು ಸೆರೆಹಿಡಿಯುವ ಕಾಳಜಿ ಹೊಂದಿರಬೇಕು ಎಂದು ಹೇಳಿದರು.
ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರುವ ಯುವ ಪತ್ರಕರ್ತರು
ಹಣದ ಆಮಿಷಕ್ಕೆ ಒಳಗಾಗದೆ, ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಬರಹ ಮತ್ತು ಸಂದರ್ಭಕ್ಕೆ ತಕ್ಕ ವಿಶೇಷತೆ ಹೊಂದಿರುವ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಹಂಬಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು ಸೆರೆಹಿಡಿಯುವ ಛಾಯಾಚಿತ್ರಗಳು ಮುಂದಿನ ಪೀಳಿಗೆಗೆ ಸಾಕ್ಷಿಯಾಗುತ್ತವೆ. ನಮ್ಮ ಸುತ್ತಮುತ್ತ ನಡೆಯುವ ಅನೇಕ ಆಸಕ್ತಿದಾಯಕ ಘಟನೆಗಳನ್ನು ಛಾಯಾಗ್ರಾಹಕನ ದೃಷ್ಟಿಕೋನದಿಂದ ಗಮನಿಸಿ ಚಿತ್ರ ಸೆರೆಹಿಡಿದಾಗ ಅವು ಮೆಚ್ಚುಗೆಗೆ ಪಾತ್ರವಾಗುತ್ತವೆ. ಛಾಯಾಚಿತ್ರಗಳು ಕೇವಲ ದೃಶ್ಯಗಳಾಗದೆ ಒಂದು ಘಟನೆಯ ಕಥೆಯನ್ನು ಹೇಳುವಂತಿರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಸಂಯೋಜಕ ಪ್ರೊ. ರಾಕೇಶ್ ವಿ. ತಾಳಿಕೋಟಿ ಮಾತನಾಡಿ, ಛಾಯಾಚಿತ್ರಗಳು ಕಥೆ ಹೇಳುವಂತಿರಬೇಕು. ಅನೇಕರು ಕೇವಲ ಚಿತ್ರ ಸೆರೆಹಿಡಿಯುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಆದರೆ ಪುರುಷೋತ್ತಮ ಹಂದ್ಯಾಳು ಅವರು ಬಹುಮುಖ ವ್ಯಕ್ತಿತ್ವ ಹೊಂದಿರುವ ಅಪರೂಪದ ವ್ಯಕ್ತಿ ಎಂದು ಪ್ರಶಂಸಿಸಿದರು.
ಛಾಯಾಗ್ರಹಣದ ಆಳ ಮತ್ತು ಅಗಲವನ್ನು ಅರಿತುಕೊಂಡು ಕಾರ್ಯನಿರ್ವಹಿಸುವವನೇ ನಿಜವಾದ ಛಾಯಾಗ್ರಾಹಕ ಎಂದು ಅಭಿಪ್ರಾಯಪಟ್ಟರು.
ಎರಡು ದಶಕಗಳಲ್ಲಿ ತಾವು ತೆಗೆದ ಕೆಲವು ಉತ್ತಮ ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದ ಹಂದ್ಯಾಳ್ ಅವರು ಆಯಾ ಸಂಧರ್ಭಗಳ ಕುರಿತು ಮನಮುಟ್ಟುವಂತೆ ವಿವರಿಸಿದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ. ಮಂಜುನಾಥ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ
ಪುರುಷೋತ್ತಮ ಹಂದ್ಯಾಳ್ ಅವರನ್ನು ವಿಭಾಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪುರುಷೋತ್ತಮ ಅವರು ರಕ್ತ ರಾತ್ರಿ ನಾಟಕದ ಶಕುನಿಯ ಜನಪ್ರಿಯ ಸಂಭಾಷಣೆಗಳನ್ನು ಪ್ರಸ್ತುತ ಪಡಿಸಿ ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿದರು.
ವಿಭಾಗದ ಉಪನ್ಯಾಸಕ ಡಾ. ಜಯರಾಜ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಶಂಕರ್ ವಂದಿಸಿದರು. ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
