
ಬಳ್ಳಾರಿ: ಮಕ್ಕಳಲ್ಲಿರುವ ಪ್ರತಿಭೆ ಅರಳಲು ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಮತ್ತು ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದು ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶ್ವ ರಾಮು ಅವರು ಹೇಳಿದರು.
ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ದಿನಾಚರಣೆಯು ಕೇವಲ ಆಚರಣೆಗೆ ಸೀಮಿತವಾಗದೆ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ, ಸೃಜನಶೀಲತೆ, ಕಲ್ಪನಾಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಗುರುತಿಸಿ ಪ್ರೋತ್ಸಾಹಿಸುವ ಮಹತ್ವದ ವೇದಿಕೆಯಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಗಿಡಕ್ಕೆ ನೀರು ಎರೆಯುವುದು ಪರಿಸರ ಸಂರಕ್ಷಣೆ ಮತ್ತು ಜೀವಪ್ರೀತಿಯ ಸಂಕೇತವಾಗಿದೆ. ಅದೇ ರೀತಿ ಮಕ್ಕಳಲ್ಲಿರುವ ಪ್ರತಿಭೆ ಅರಳಲು ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಮತ್ತು ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದರು.
ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಶಿಕ್ಷಕ ವೃತ್ತಿ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಬೋಧಿಸುವುದಲ್ಲ; ಪ್ರತಿಯೊಬ್ಬ ಮಗುವಿನ ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ವೈಯಕ್ತಿಕ ಭಿನ್ನತೆಗಳನ್ನು ಅರ್ಥಮಾಡಿಕೊಂಡು ಅವರ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದಾಗಿದೆ ಎಂದು ತಿಳಿಸಿದರು.
ಇಂದಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ನಾಳಿನ ಭವಿಷ್ಯದ ಶಿಕ್ಷಕರಾಗಿದ್ದು, ಮಕ್ಕಳ ಮನೋವಿಜ್ಞಾನವನ್ನು ಅರಿತುಕೊಂಡು ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣವನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಕ್ರೀಡೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿ ಮಕ್ಕಳ ಸಾಹಿತಿ ಡಾ. ಕೆ. ಶಿವಲಿಂಗಪ್ಪ ಹಂದ್ಯಾಳ್ ಅವರು ಮಾತನಾಡಿ, ಮಕ್ಕಳಿಗೆ ಕೇವಲ ಪದವಿಗಳು ಮತ್ತು ಶೈಕ್ಷಣಿಕ ಅರ್ಹತೆಗಳು ಮುಖ್ಯವಾಗುವುದಿಲ್ಲ. ಶಿಕ್ಷಕರು ಮಕ್ಕಳೊಂದಿಗೆ ಮಗುವಾಗಿ ಬೆರೆತು, ಅವರ ಭಾವನೆಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿದ್ದು, ಅವರಲ್ಲಿ ಅಪಾರವಾದ ಕಲ್ಪನಾಶಕ್ತಿ ಮತ್ತು ಸೃಜನಶೀಲತೆ ಅಡಗಿರುತ್ತದೆ. ಶಿಕ್ಷಕರು ಮಕ್ಕಳ ಮೇಲೆ ತಮ್ಮ ವಿಚಾರಗಳನ್ನು ಬಲವಂತವಾಗಿ ಹೇರದೆ, ಅವರ ಆಲೋಚನೆಗಳಿಗೆ ಸ್ವಾತಂತ್ರ್ಯ ನೀಡಬೇಕು ಎಂದು ಹೇಳಿದರು.
ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವುದರ ಜೊತೆಗೆ ಅವರಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಹೊಸದನ್ನು ಕಲಿಯುವ ಆಸಕ್ತಿಯನ್ನು ಬೆಳೆಸಬೇಕು. ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸಿ, ಪ್ರೋತ್ಸಾಹಿಸುವುದೇ ನಿಜವಾದ ಶಿಕ್ಷಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಾಧಾರಿತ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಮಹತ್ವ ನೀಡಬೇಕು ಎಂದು ಹೇಳಿದರು. ಮಕ್ಕಳು ಕ್ರೀಡೆ, ಸಾಹಿತ್ಯ, ಭಾಷಣ, ಚಿತ್ರಕಲೆ, ಸಂಗೀತ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಅವರಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ, ನಾಯಕತ್ವ ಗುಣ, ಸಂವಹನ ಕೌಶಲ್ಯ ಮತ್ತು ಸಾಮಾಜಿಕ ಪ್ರಜ್ಞೆ ಬೆಳೆಯುತ್ತವೆ ಎಂದರು. ಅಂಕಗಳು ಮತ್ತು ಪದವಿಗಳ ಆಧಾರದ ಮೇಲೆ ಮಾತ್ರ ಮಕ್ಕಳ ಸಾಮರ್ಥ್ಯವನ್ನು ಅಳೆಯದೆ, ಅವರಲ್ಲಿರುವ ಮಾನವೀಯ ಮೌಲ್ಯಗಳು, ನೈತಿಕ ಪ್ರಜ್ಞೆ ಮತ್ತು ಸೃಜನಾತ್ಮಕ ಆಲೋಚನೆಗಳಿಗೂ ಆದ್ಯತೆ ನೀಡಬೇಕು ಎಂದು ತಮ್ಮ ಉಪನ್ಯಾಸದಲ್ಲಿ ಮನಮುಟ್ಟುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಕೆ. ಶಿವಲಿಂಗಪ್ಪ ಹಂದ್ಯಾಳ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ಪ್ರಥಮ ಹಾಗೂ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಪ್ರಶಿಕ್ಷಣಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಗೌಸಿಯಾ ಎಜುಕೇಶನ್ ಮೈನಾರಿಟೀಸ್ ಸೊಸೈಟಿಯ ಅಧ್ಯಕ್ಷರಾದ ಆಲ್ಮಸ್ ತಬಸ್ಸುಮ್, ಆಡಳಿತಾಧಿಕಾರಿಗಳಾದ ಹಫೀಜಾ ಬೇಗಂ, ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಆಂಥೋನಿ ಐ., ನಾಗವೇಣಿ ಎನ್.ಎಂ., ಬೋಧಕೇತರ ಸಿಬ್ಬಂದಿಗಳಾದ ಭೀಮಪ್ಪ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಸೈಯದ್ ಅಲಿ ಪ್ರಾರ್ಥಿಸಿದರು. ಶ್ರೀವಾಣಿ ಸಿ. ಸ್ವಾಗತಿಸಿದರು. ಅಬೀದ್ ಹುಸೇನ್ ಅತಿಥಿಗಳನ್ನು ಪರಿಚಯಿಸಿದರು. ಶಿವಗಂಗಾ ವಂದಿಸಿದರು. ಆಲಂ ಬಾಷಾ ನಿರೂಪಿಸಿದರು.
