ಬಳ್ಳಾರಿಯಲ್ಲಿ ಸಂಭ್ರಮದ 73ನೇ ಗಣರಾಜ್ಯೋತ್ಸವ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ -ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ,ಜ.26: ಸಂವಿಧಾನದ ಆಶಯದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ದವಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
73ನೇ ಗಣರಾಜ್ಯೋತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.
ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ನಮ್ಮ ಜಿಲ್ಲೆಯ ಶಕ್ತಿಯಾಗಿವೆ. ಜಗತ್ತಿನ ಶ್ರೇಷ್ಠ ದರ್ಜೆಯ ಕಬ್ಬಿಣ ಮತ್ತು ಉಕ್ಕಿನ ಖನಿಜ ಬಳ್ಳಾರಿ ಜಿಲ್ಲೆಯಲ್ಲಿ ಇದೆ ಎಂದು ತಿಳಿಸಿದರು.
2021-22 ಸಾಲಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ಬಳ್ಳಾರಿ ಜಿಲ್ಲೆಯ 86,490 ರೈತರಿಗೆ 10ನೇ ಕಂತಿನ ವರೆಗೆ ಒಟ್ಟು 13,736 ಲಕ್ಷ ರೂ.ವರ್ಗಾವಣೆಯಾಗಿದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಸುರಿದ ಬಾರಿ ಮಳೆಯಿಂದ ರೈತರಿಗೆ ಆದ ನಷ್ಟದ ಹಿನ್ನೆಲೆಯಲ್ಲಿ 53,065 ರೈತರಿಗೆ 4,936 ಲಕ್ಷಗಳ ಬೆಳೆ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.


ಕ್ರಿಯಾಯೋಜನೆ ತಯಾರು: ಜಿಲ್ಲಾ ಖನಿಜ ಪ್ರತಿಷ್ಠಾನ ವತಿಯಿಂದ 2015-16 ಸಾಲಿನಿಂದ ಈವರೆಗೆ 1845.98 ಕೋಟಿ ರೂಪಾಯಿ ಸಂಗ್ರಹವಾಗಿರುತ್ತದೆ. 2222.15 ಕೋಟಿಯ 6 ಕ್ರಿಯಾ ಯೋಜನೆಗಳನ್ನು ತಯಾರಿಸಲಾಗಿದ್ದು, ಹೆಚ್ಚಿನ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಿವರಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಒಟ್ಟು 2422 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, 737 ಕಾಮಗಾರಿಗಳು ಮುಕ್ತಾಯಗೊಂಡಿವೆ. 603 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಿದ್ದು, ಮೂರನೇ ಅಲೆಯಲ್ಲಿ ಬರಬಹುದಾದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮುಖ್ಯಮಂತ್ರಿಗಳು ಬಳ್ಳಾರಿ ಸೇರಿದಂತೆ 12 ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವೆಗಳಿಗೆಇಂದು ಚಾಲನೆ ನೀಡಲಿದ್ದಾರೆ. ಕಂದಾಯ, ಆರೋಗ್ಯ, ಆಹಾರ ಸೇರಿದಂತೆ ವಿವಿಧ ಇಲಾಖೆಗಳ ಸುಮಾರು 100 ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ಬರಲಿದೆ. ಈ ಮೂಲಕ ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಇದೆ ನಮ್ಮ ಸಂವಿಧಾನದ ಶಕ್ತಿ ಎಂದರು.
ಜನರು ಸರ್ಕಾರದ ಬಾಗಿಲಿಗೆ ಹೋಗಬಾರದು, ಸರ್ಕಾರವೇ ಜನರ ಬಾಗಿಲಿಗೆ ಬರಬೇಕು. ಅದೇ ನಿಜವಾದ ಜನತಂತ್ರ ಎಂದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ 1,500 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದಲ್ಲದೆ, ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗಾಗಿ ಎಸ್ಸಿಪಿ/ಟಿಎಸ್ಪಿ ಅನುದಾನವನ್ನು ಸುಮಾರು 26 ಸಾವಿರ ಕೋಟಿ ರೂ.ಗಳಷ್ಟು ಮೀಸಲಿಡಲಾಗಿದೆ ಎಂದು ವಿವರಿಸಿದರು.


ಶಿಕ್ಷಣ, ಕೃಷಿ-ಕೈಗಾರಿಕೆ, ವಿಜ್ಞಾನ-ತಂತ್ರಜ್ಞಾನ, ಬಡವರ ಕಲ್ಯಾಣ, ಸಾಮಾಜಿಕ ನ್ಯಾಯ, ಆರ್ಥಿಕತೆಯಲ್ಲಿ, ರಾಜ್ಯ – ರಾಷ್ಟ್ರವನ್ನು ಶ್ರೇಷ್ಠ ಶಕ್ತಿಯನ್ನಾಗಿ ಮಾಡಬೇಕಿದೆ. ಇದೇ ನಮ್ಮ ಸಂವಿಧಾನದ ಆಶಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ,ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ವಿಧಾನಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಬುಡಾ ಅಧ್ಯಕ್ಷ ಪಾಲನ್ನ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,‌ ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಸೈದುಲು ಅಡಾವತ್, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್, ಡಿಎಫ್‍ಒ ಸಿದ್ರಾಮಪ್ಪ ಚಳಕಾಪುರೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು ಮತ್ತು ಅರಣ್ಯ ಮತ್ತು ಮಹಾನಗರ ಪಾಲಿಕೆಯ ನೂತನವಾಹನಗಳಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.
*****