Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೭೩೫, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ ಕವನದ ಶೀರ್ಷಿಕೆ:ಅಪ್ಪ - Karnataka Kahale

ಅನುದಿನ ಕವನ-೭೩೫, ಕವಿ: ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ ಕವನದ ಶೀರ್ಷಿಕೆ:ಅಪ್ಪ

ಅಪ್ಪ

ಕೇಳಿರುವುದನೆಲ್ಲ ತಂದು ಕೊಟ್ಟು ಗತ್ತಿನಿಂದ ಗೊತ್ತಿಲ್ಲದವರಂತೆ ನಟಿಸಿದವನು ಅಪ್ಪ||
ಮಾತು ಕಠೋರವೆನಿಸಿದರೂ ಮನಸ್ಸು ಮಲ್ಲಿಗೆಯಷ್ಟು ಮೃದುವಾಗಿದ್ದವನು ಅಪ್ಪ||

ಗೋಗರೆದು ಬಿನ್ನಯಿಸಿಕೊಂಡರೂ ಹಸಿವು ಅರ್ಥೈಸಿಕೊಳ್ಳದವರ ಎದುರಲ್ಲಿ|
ಮುಖ ನೋಡಿಯೇ ಬೇಕು ಬೇಡಗಳನ್ನು ಅಕ್ಕರೆಯಿಂದ ಪೂರೈಸಿದವನು ಅಪ್ಪ||

ತೊಟ್ಟಿರುವ ಉಡುಗೆಯನ್ನು ಕಂಡು ಸಲಾಂ ಹೊಡೆಯುವವರ ಮಧ್ಯದಲ್ಲಿ|
ಬೆನ್ನು ಹರಿದ ತನ್ನಂಗಿಯ ಕಡೆಗನಿಸಿ ಹೊಸ ಬಟ್ಟೆ ಕೊಡಿಸಿದವನು ಅಪ್ಪ||

ಬದುಕಿನಲ್ಲಿ ಬಂದು ಹೋಗುವ ಎಡರು ತೊಡರುಗಳಿಗೆ ಭಯ ಪಟ್ಟವರೇ ಹೆಚ್ಚು|
ಕಷ್ಟಗಳ ಕುಂಡದಲಿ ತಾ ಬೆಂದು ಬಸವಳಿದರೂ ಎಂದೂ ಎದೆ ಗುಂದದವನು ಅಪ್ಪ||

ಸೋತು ಹೋದಾಗ ಹೂತು ಹಾಕುವ ಜಗ ಜಯಿಸಿದರೆ ಮಾತ್ರ ಜೈ ಎನ್ನುವುದು|
ಹಗಲೂ ರಾತ್ರಿ ಹೆಗಲಿಗೆ ಹೆಗಲಾಗಿ ಈ ಲೋಕವನ್ನು ಪರಿಚಯಿಸಿದವನು ಅಪ್ಪ||

ಏರುವ ಮೆಟ್ಟಿಲುಗಳು ಗಟ್ಟಿಯಾಗಿದ್ದರೆ ಬೆಟ್ಟವೇ ಪಾದದಡಿ ನಿಲ್ಲುವುದು|
‘ಗಟ್ಟಿಸುತ’ ಇಟ್ಟ ಗುರಿ ಮುಟ್ಟಲು ತನಗಿಂತ ಹೆಚ್ಚು ಕನಸು ಕಟ್ಟಿ ಕೊಟ್ಟವನು ಅಪ್ಪ||


-ಎಂ.ಡಿ.ಬಾವಾಖಾನ ಸುತಗಟ್ಟಿ, ಬೆಳವಡಿ
*****