ಶ್ರಮಜೀವಿಗಳ ‘ಶ್ರಮ’ ಅರಿಯಲು ಶ್ರಮದಾನ: ಒಂದು ಅನುಭವ -ಎಚ್.ಕೆ. ವಿವೇಕಾನಂದ, ಬೆಂಗಳೂರು

ಶ್ರಮಧಾನ ಪರಿಕಲ್ಪನೆಯ ಪ್ರಯೋಗ ನಿಗದಿಯಾದ ದಿನಕ್ಕಿಂತ ಒಂದು ದಿನ ಮೊದಲೇ ಪ್ರಾರಂಭವಾಯಿತು. ಅಂದರೆ ಆ.15ರ ಸ್ವಾತಂತ್ರ್ಯೋತ್ಸವದ ದಿನ ಬೆಂಗಳೂರಿನ ಜ್ಞಾನ ಭಾರತಿ ನಿವಾಸಿಗಳ ಸಂಘದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ, ಸಣ್ಣ ಭಾಷಣ ಮಾಡಿ, ಅಲ್ಲಿಯೇ ಶ್ರೀಗಂಧದ ಗಿಡ ನೆಟ್ಟು, ನೇರವಾಗಿ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ವತಿಯಿಂದ ಆಯೋಜನೆಗೊಂಡಿದ್ದ ಬೆಂಗಳೂರು ದಕ್ಷಿಣ ಜಿಲ್ಲೆಯ, ರಾಮನಗರ ತಾಲೂಕಿನ, ಬಿಡದಿ ಹೋಬಳಿಯ ತೊರೆದೊಡ್ಡಿ ( ಅಂಗರಹಳ್ಳಿ) ಸರ್ಕಾರಿ ಪ್ರೌಢಶಾಲೆಯ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸುಮಾರು ಒಂದು ಎಕರೆಯಷ್ಟು ಜಾಗವನ್ನು ಸ್ವಚ್ಛಗೊಳಿಸುವ ಉದ್ದೇಶ ಹೊಂದಲಾಗಿತ್ತು. ಮಧ್ಯಾಹ್ನ 12:30 ಗಂಟೆಗೆ ಪ್ರಾರಂಭವಾದ ಸ್ವಚ್ಛತಾ ಕೆಲಸ ಸಂಜೆ 7 ಗಂಟೆಯವರೆಗೂ ಮುಂದುವರಿಯಿತು.

ಮೈದಾನದಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಓಡಿ ಬೆವರು ಹರಿಸುವ ನನಗೆ ಮೈಬಗ್ಗಿಸಿ ತೂಕ ಎತ್ತುವ, ಭಾರ ಎಳೆಯುವ, ಕೈಯನ್ನು ಮಣ್ಣಾಗಿಸಿ ಕೆಲಸ ಮಾಡುವ ವಿಷಯದಲ್ಲಿ ಯಾವ ಅನುಭವವವೂ ಇರಲಿಲ್ಲ. ಶಿಕ್ಷಕರ ಮಗನಾದ ನನಗೆ ಚಿಕ್ಕ ವಯಸ್ಸಿನಿಂದಲೇ ಓದು, ಬರಹ, ಮಾತು, ಮೇಲ್ವಿಚಾರಣೆ ಇವುಗಳಲ್ಲಿಯೇ ಬಹುತೇಕ ಜೀವನ ಕಳೆದವನು. ಆದರೆ 11500 ಕಿಲೋಮೀಟರ್ಗಳ, 385 ದಿನಗಳ ಪಾದಯಾತ್ರೆ ಮತ್ತು ಅದಕ್ಕೆ ಹಿಂದಿನ ಅತ್ಯಂತ ಸಂಘರ್ಷಮಯ ಏಳುಬೀಳಿನ ಬದುಕು ಒಂದಷ್ಟು ಪಾಠವನ್ನು ಕಲಿಸಿತ್ತು.

ತಾಯಿಯ ನಿಧನದ ನಂತರ ಇನ್ನೊಂದಷ್ಟು ಶ್ರಮದ ಕೆಲಸವನ್ನು ಮಾಡಿ ಅರಿವನ್ನು ವಿಸ್ತಾರಗೊಳಿಸಬೇಕಾದ ನಿಟ್ಟಿನಲ್ಲಿ, ಕೇವಲ ಓದು, ಅಧ್ಯಯನ, ಚಿಂತನೆಗಳು ಮಾತ್ರವಲ್ಲದೆ ಶ್ರಮಜೀವಿಗಳ ಕೆಲಸವನ್ನು ಸ್ವಲ್ಪಮಟ್ಟಿಗೆ ಅರಿಯುವ ಪರಿಕಲ್ಪನೆ ಮನಸ್ಸಲ್ಲಿ ಮೂಡಿತು. ಅದರ ಅನುಷ್ಠಾನವೇ ಈ ಶ್ರಮದಾನ.

ಸಣ್ಣಪುಟ್ಟ ಮೈ ಕೈ ಗೀಚಿದ ಗಾಯಗಳ ನಡುವೆ ಅಲ್ಲಿ ಸೇರಿದ ಎಲ್ಲಾ ಸ್ನೇಹಿತರ ಬೆಂಬಲ, ಸಹಕಾರದೊಂದಿಗೆ ಯಾವುದೇ ರೀತಿಯ ಮೈಗಳ್ಳತನ ತೋರದೆ ಸಾಧ್ಯವಾದಷ್ಟು ನಿಷ್ಠೆಯಿಂದ ಕೆಲಸ ಮಾಡಿದೆ. ಅಲ್ಲಿ ಒಣಗಿದ ಮರ ಮತ್ತು ಎಲೆಗಳನ್ನು ಟ್ರ್ಯಾಕ್ಟರ್ ನಲ್ಲಿ ಸಾಗಿಸುತ್ತಿದ್ದ ವ್ಯಕ್ತಿ ಅಷ್ಟು ಜನರ ನಡುವೆ ನನಗೆ ನೀವು ಚೆನ್ನಾಗಿ ಕೆಲಸ ಮಾಡುತ್ತೀರಿ ಎಂದು ಹೇಳಿದ್ದು ಒಂದು ರೀತಿಯ ಹೆಮ್ಮೆ ಎನಿಸಿತು. ಅವರು ಏಕೆ ಹಾಗೆ ಹೇಳಿದರೋ ಗೊತ್ತಿಲ್ಲ. ನನ್ನ ಸ್ನೇಹಿತರು ನನಗಿಂತ ಚೆನ್ನಾಗಿ ಕೆಲಸ ಮಾಡುತ್ತಿದ್ದರು. ಆದರೂ ಆತ ನನ್ನನ್ನೇ ಗುರುತಿಸಿದ್ದು ನನಗೆ ಖುಷಿ ನೀಡಿತು. ಸಂಜೆ ಎಲ್ಲರೂ ಸೇರಿ ಶ್ರಮದ ನಂತರ ಹೋಟೆಲ್ನಲ್ಲಿ ತಿಂಡಿ ತಿಂದು ಹರಟಿದೆವು.

ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ  ಎಚ್ ದೀಪಕ್ ಅವರು, ಪರಿಸರ ಸೇನೆಯ ಮಂಜಪ್ಪ ಮತ್ತು ತಂಡದವರು, ನಿಶ್ಚಿತ ಪ್ರಾಪರ್ಟೀಸ್ ನ ಮಧುಸೂಧನ್,  ಮಲ್ಲೇಶ್ ಮತ್ತು ತಂಡದವರು, ಇತ್ತೀಚೆಗಷ್ಟೇ ಬೀದರ್ ನಿಂದ ಬೆಂಗಳೂರಿನವರೆಗೂ ಭಾಷಾ ಸೌಹಾರ್ದತೆಗಾಗಿ, ಕನ್ನಡದ ಅಸ್ಮಿತೆಗಾಗಿ ಬೀದರ್ ನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡಿದ  ರೂಪೇಶ್ ಪುತ್ತೂರು, ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಮತಿ ಸಂಗೀತಾ ಅವರು, ಚಿತ್ರ ಸಾಹಿತಿ  ಜೋಗ್ ರಮೇಶ್ ಅವರು, ಚಿಂತಕರಾದ  ವೇಣುಗೋಪಾಲ್ ಅವರು, ಕಾರ್ ರೇಸ್ ನ ಪರೀಕ್ಷಾ ಚಾಲಕರಾಗಿದ್ದ ನಾರಾಯಣ್ ಅವರು,  ಬಿರಾದಾರ್ ಅವರು  ಪ್ರಶಾಂತ್ ಅವರು,  ಗುರುರಾಜ್ ಅವರು ಜೊತೆಗೆ ಹೆಸರು ಮರೆತಿರುವ, ನೆನಪಾಗದ ಕೆಲವು ಸ್ನೇಹಿತರು ಇದರಲ್ಲಿ ಭಾಗವಹಿಸಿದ್ದರು. ಅವರಿಗೆ ತುಂಬು ಹೃದಯದ ಧನ್ಯವಾದಗಳು.

ಇದರ ನಂತರ ರಾತ್ರಿಯೇ ಸರ್ಕಾರಿ ಬಸ್ಸಿನಲ್ಲಿ ಲಗೇಜ್ ಹಿಡಿದು ನಿಂತೇ ಶ್ರೀರಂಗಪಟ್ಟಣದವರಿಗೂ ಪ್ರಯಾಣ ಮಾಡಿದೆ. ಅಲ್ಲಿ ಗೆಳೆಯರಾದ ನಾರಾಯಣ್ ಮತ್ತು ಅವರ ಮಗ ನೂತನ್ ಶ್ರೀಕರ್ ಜೊತೆಯಾಗಿ ಪಾಲಹಳ್ಳಿಯ ಮನೆಗೆ ಕರೆದುಕೊಂಡು ಹೋದರು. ರಾತ್ರಿ ಅವರ ಮನೆಯಲ್ಲಿಯೇ ಮಲಗಿ, ಬೆಳಗ್ಗೆ ಕಾವೇರಿ ನದಿಯ ರಂಗನತಿಟ್ಟು ಪಕ್ಷಿಧಾಮದ ಹಿಂಭಾಗದಲ್ಲಿ ಹರಿಯುವ ನೀರಿನಲ್ಲಿಯೇ ಸಿದ್ದರಾಗಿ, ಮೊದಲೇ ನಿಶ್ಚಯವಾದಂತೆ ಅವರ ತೋಟಕ್ಕೆ ಹೋಗಿ ಅಲ್ಲಿ ಕಳೆಯನ್ನು ಯಂತ್ರದ ಮೂಲಕ ಕತ್ತರಿಸುವ ಕೆಲಸವನ್ನು ಮಾಡಿದೆವು. ಅದು ಅಷ್ಟೇನೂ ಸುಲಭವಾಗಿರಲಿಲ್ಲ. ಉದ್ದನೆಯ ಶೂ, ಕೈಗೆ ಗ್ಲೌಸ್ ಮತ್ತು ತಲೆಗೆ ಹೆಲ್ಮೆಟ್ ಹಾಕಿಕೊಂಡು ಒಂದಷ್ಟು ಕೆಲಸ ಮಾಡಿದೆವು. ಯಾವುದೇ ಅನುಭವ ಇಲ್ಲದ ನನಗೆ ಸ್ವಲ್ಪ ಆಯಾಸವಾಗಿದ್ದು ನಿಜ

ಅಲ್ಲಿ ಗೆಳೆಯರಾದ, ಸಾಮಾಜಿಕ ಹೋರಾಟಗಾರರೂ ಆದ, ಆದಿವಾಸಿಗಳ ಹಿತ ರಕ್ಷಣೆಗಾಗಿ ದುಡಿಯುತ್ತಿರುವ ಶ್ರೀ ಪಾಲಹಳ್ಳಿ ಪ್ರಸನ್ನ ಅವರು ಸಹ ಸ್ವಲ್ಪ ಹೊತ್ತು ಜೊತೆಯಾದರು.

ಅಲ್ಲಿಯೇ ಆಗಾಗ ಪಪ್ಪಾಯ, ಸೀಬೆ, ಎಳನೀರು, ಕಾಯಿ ಕೊಬ್ಬರಿ ಸೇವಿಸಿ, ಮಧ್ಯಾಹ್ನದ ಊಟವನ್ನು ಮುಗಿಸಿ ಮತ್ತೆ ಗುಂಡಿ ತೋಡುವ ಯಂತ್ರದ ಸಹಾಯದಿಂದ ಒಂದು ಗುಂಡಿ ತೆಗೆದು ತೆಂಗಿನ ಮರವನ್ನು ನೆಟ್ಟು, ಅಲ್ಲಿಯೇ ಹರಿಯುತ್ತಿದ್ದ ಕಾವೇರಿ ನದಿಯಿಂದಲೇ ಎರಡು ಬಿಂದಿಗೆ ನೀರು ತಂದು ಹಾಕಿದೆನು. ಎರಡನೆಯ ದಿನದ ಶ್ರಮಧಾನ ಮುಗಿಸಿ ಬೆಂಗಳೂರಿಗೆ ವಾಪಸ್ಸಾದೆನು.

ಸಾಮಾನ್ಯವಾಗಿ ವಾರಕ್ಕೆ ಒಂದು ಶ್ರಮದಾನ ಕೆಲಸವಿರುತ್ತದೆ. ಆದರೆ ಪ್ರಾರಂಭದಲ್ಲಿ ಎರಡು ದಿನ ಸತತವಾಗಿ ದೇಹವನ್ನ ದಂಡಿಸಿದೆ. ಎರಡು ವಿಭಿನ್ನ ಕೆಲಸಗಳಲ್ಲಿ ತೊಡಗಿಸಿಕೊಂಡೆನು. ಮುಂದಿನ ಶ್ರಮಧಾನ ಇದೇ ಆ. 24 ಸೋಮವಾರ ಬೆಂಗಳೂರಿನ ಲಾಲ್ ಬಾಗ್ ಬಳಿ ಇರುವ ಗೆಳೆಯರ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತೇನೆ. ತದನಂತರ 30ನೇ ತಾರೀಕು ನಾಲ್ಕನೆಯ ಶ್ರಮಧಾನದ ಭಾಗವಾಗಿ ನಂದಿ ಬೆಟ್ಟದ ತಪ್ಪಲಿನಲ್ಲಿ ಇರುವ ಸ್ನೇಹಿತರ ಹೋಟೆಲ್ ನಲ್ಲಿ ಟೇಬಲ್ ಕ್ಲೀನ್ ಮಾಡುವ ಮತ್ತು ಸಪ್ಲೈ ಮಾಡುವ ಕೆಲಸವನ್ನು ಮಾಡುವ ಯೋಜನೆ ಇದೆ.

ಹೀಗೆ ಶ್ರಮದಾನದ ಪರಿಕಲ್ಪನೆಯಲ್ಲಿ ಒಂದು ವರ್ಷದವರೆಗೂ ನಿರಂತರವಾಗಿ ಕೆಲಸ ಮಾಡುವ ಯೋಜನೆ ಇದೆ. ಅದರಿಂದ ಆಗುವ ಬದಲಾವಣೆಗಳನ್ನು ಮುಂದೆ ದಾಖಲಿಸುತ್ತಾ ಹೋಗುತ್ತೇನೆ. ಅನಾವಶ್ಯಕ ಒತ್ತಡಕ್ಕೆ ಒಳಗಾಗದೆ, ಇಲ್ಲದ ಅನುಭವಗಳನ್ನು ಹಂಚಿಕೊಳ್ಳದೆ ಸಹಜವಾಗಿಯೇ ಕೆಲಸ ಮಾಡುತ್ತಾ ಹೋಗುವ ಸಂಕಲ್ಪದೊಂದಿಗೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,


-ವಿವೇಕಾನಂದ. ಎಚ್. ಕೆ, ಬೆಂಗಳೂರು

Leave a Reply

Your email address will not be published. Required fields are marked *