ಬಳ್ಳಾರಿಯಲ್ಲಿ 5 ಸಾವಿರ ಕೋಟಿ ರೂ. ವೆಚ್ಚದ ಜೀನ್ಸ್ ಅಪೆರಲ್ ಪಾರ್ಕ್‌ ನಿರ್ಮಾಣಕ್ಕೆ ಸರಕಾರ‌ ಬದ್ಧ -ಯುವಜನ ಸೇವಾ ಸಚಿವ ಬಿ.ನಾಗೇಂದ್ರ

ಬಳ್ಳಾರಿ: ಜೂ.4: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಭರವಸೆ ನೀಡಿರುವಂತೆ ಬಳ್ಳಾರಿಯಲ್ಲಿ 5 ಸಾವಿರ ಕೋಟಿ ರೂ. ವೆಚ್ಚದ ಜೀನ್ಸ್ ಅಪೆರಲ್ ಪಾರ್ಕ್‌ ನಿರ್ಮಾಣಕ್ಕೆ ರಾಜ್ಯ ಸರಕಾರ‌ ಬದ್ಧವಾಗಿದೆ ಎಂದು ಯುವಜನ ಸೇವೆ ಕ್ರೀಡಾ ಇಲಾಖೆಯ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಅವರು ನಗರದಲ್ಲಿ ಭಾನುವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಹುಲ್ ಗಾಂಧಿಯವರು ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಹೇಳಿದಂತೆ ಜೀನ್ಸ್ ಅಪೇರಲ್ ಪಾರ್ಕ ನಿರ್ಮಿಸಲಾಗುವುದು, ರಾಹುಲ್ ಗಾಂಧಿ ಅವರು ಬಳ್ಳಾರಿ ಜೀನ್ಸ್ ಬಗ್ಗೆ ದೇಶ ವಿದೇಶಗಳಲ್ಲಿ ಮಾತನಾಡಿದ್ದಾರೆ. 5 ಗ್ಯಾರೆಂಟಿಗಳ ಅನುಷ್ಠಾನ ಜಾರಿ ನಂತರ ಜೀನ್ಸ್ ಅಪೇರಲ್ ಪಾರ್ಕ್ ಗಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಮುಖ್ಯಮಂತ್ರಿಗಳು 5000 ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅರಣ್ಯ ಪರಿಸರದಲ್ಲಿ ವಾಸ ಮಾಡುವ ಪರಿಶಿಷ್ಟ ಪಂಗಡಗಳ ಜನರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ ಅವರು, ಯೋಜನೆಗಳು ಪಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಬಡತನ ರೇಖೆಗಳಿಗಿಂತ ಕೆಳಗಿರುವ ಎಲ್ಲಾ ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಅದ್ಯತೆ ನೀಡಲಾಗುವುದು ಎಂದರು.
ಯುವಕನಾಗಿರುವುದರಿಂದ ಉತ್ತಮ ಕಾರ್ಯ ಮಾಡುವ ನಂಬಿಕೆಯಿಂದ ಯುವಜನ ಸೇವಾ ಕ್ರೀಡಾ ಇಲಾಖೆಯನ್ನು ಮುಖ್ಯಮಂತ್ರಿಗಳು ತಮಗೆ ನೀಡಿದ್ದಾರೆ. ಬಳ್ಳಾರಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಉತ್ತಮ ಕ್ರೀಡಾಂಗಣ ಹಾಗೂ ಸೌಲಭ್ಯಗಳಿಲ್ಲದೆ ಮಕ್ಕಳು ಕ್ರೀಡೆಯಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿ ನಗರದಲ್ಲಿ ಸುಸಜ್ಜಿತವಾದ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಇಲಾಖೆಗಳಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಕ್ರಮ ಜರುಗಿಸುವ ಕುರಿತು ಸ್ಪಷ್ಟ ಪಡಿಸಿದ್ದಾರೆ. ತಮ್ಮ ಇಲಾಖೆಯಲ್ಲೂ ಕಂಡು ಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಯುವಜನ ಸೇವೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಖಾತೆಯನ್ನೂ ಹೆಚ್ಚುವರಿಯಾಗಿ ನೀಡಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಡಿ ಉತ್ತಮ ಕಾರ್ಯ ನಿರ್ವಹಿಸುವ ಗುರಿ ಹೊಂದಿದ್ದೇನೆ ಎಂದು ಸಚಿವರು ಹೇಳಿದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವನಾಗಿ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಬೀದರ್, ಬೆಳಗಾವಿಯ ಕಟ್ಟ ಕಡೆ ಗ್ರಾಮಗಳಿಗೆ ಭೇಟಿ ನೀಡಿ ಹಾಡಿ, ಗ್ರಾಮ ವಾಸ್ತವ್ಯ ಎಂದು ತಿಳಿಸಿದರು.

*****

Leave a Reply

Your email address will not be published. Required fields are marked *