ಅನುದಿನ ಕವನ-೧೯೪೯, ಕವಯತ್ರಿ(ತೆಲುಗು ಮೂಲ): ಮೆರ್ಸಿ ಮಾರ್ಗರೇಟ್‌, ಕನ್ನಡಕ್ಕೆ : ಡಾ. ಶಿವಕುಮಾರ್ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಪ್ರಿಯವಾದ ನಿನಗೆ ಬಿಡುಗಡೆಗೊಂಡ ಮನಕೆ…..

ಪ್ರಿಯವಾದ ನಿನಗೆ
ಬಿಡುಗಡೆಗೊಂಡ ಮನಕೆ…..
ಈ ಪತ್ರವನ್ನು ನಿನಗೆ ಬರೆಯುತ್ತಿದ್ದೇನೆ ಅಂದುಕೊಳ್ಳದಿರು. ನನ್ನನೊಳಗೆ ಇನ್ನೂ ನಿನ್ನ ಹೆಸರನ್ನು ಉಚ್ಚರಿಸೋ ಋತುವಿಗೆ ಬರೆಯುತ್ತಿದ್ದೇನೆ.
ಬಿಡುಗಡೆಯಾದ ಮನುಷ್ಯರ ಕುರಿತು ನನಗೀಗ ಒಂದು ವಿಷಯ ತಿಳಿದಿದೆ. ಅವರು ಒಬ್ಬರನ್ನೊಬ್ಬರು ಮರೆಯರು. ನೆನಪಿಸಿಕೊಳ್ಳಲು ನೋಡುತ್ತಾರೆ ಅಷ್ಟೇ.
ಈ ಸಂಜೆಯ ಮಳೆ ಕಿಟಕಿಯ ಬಡಿವಾಗ, ಬಾಗಿಲು ತೆರೆಯಲಾ ಬೇಡವಾ ಎಂದು ಸ್ವಲ್ಪಹೊತ್ತು ಆಲೋಚಿಸಿದೆನು. ಏಕೆಂದರೆ ಕೆಲವು ಋತುಗಳು ಅತಿಥಿಗಳಾಗವು.
ಈ ಸಂಜೆಯೂ ಹಾಗೆಯೇ ಮಳೆ ಆರಂಭವಾದಾಗ ಕಿಟಕಿ ಮುಚ್ಚಲೆಂದು ಎದ್ದೆ. ಆಗಲೇ ನೆನಪಾಯಿತು. ಒಂದು ಕಾಲದಲ್ಲಿ ನೀನು ಮಳೆಯಾಗುವಾಗ ಎಂದಿಗೂ ಕಿಟಕಿ ಮುಚ್ಚಲು ಬಿಡುತ್ತಿರಲಿಲ್ಲ.
“ ಮನೆ ಸ್ವಲ್ಪ ಒದ್ದೆಯಾದರೆ ಏನಾಗುತ್ತದೆ?” ಎನ್ನುತ್ತಿದ್ದವ.
ನಾವಿಬ್ಬರು ಒಬ್ಬರನ್ನೊಬ್ಬರು ಒದ್ದೆಯಾಗಲು ಮಾತ್ರ ಬಿಡಲಿಲ್ಲ. ಈಗ ಆ ಒಂದೇ ವಾಕ್ಯವು ನನ್ನ ಜೀವನದುದ್ದಕೂ ಬೆಂಬತ್ತಿದೆ. ಮನೆ ಒದ್ದೆಯಾಗಲಿಕ್ಕೆ ಭಯಪಡದ ನಾವು, ನಮ್ಮ ಹೃದಯಗಳನ್ನು ಒದ್ದೆಯಾಗಿಸಲಿಕ್ಕೆ ಯಾಕೆ ಭಯಪಟ್ಟೆವು?
ವಿಚ್ಛೇದನದ ದಿವಸ ನ್ಯಾಯಾಧೀಶ ನಮ್ಮ ಹೆಸರುಗಳನು ಓದಿದ. ನಾವಿಬ್ಬರೂ “ಹೌದು” ಎಂದೆವು. ಆ ದಿನ ಒಂದು ಅರ್ಥವಾಯಿತು. ಪ್ರೇಮವು ಸತ್ತಾಗ ಮನುಷ್ಯರು ದುಃಖಿಸರು. ತಮ್ಮೊಳಗೆ ಇನ್ನೂ ಬದುಕಿದ ಪ್ರೇಮವನ್ನು ಎಲ್ಲಿಡಬೇಕೋ ತಿಳಿಯದೆ ಅಳುತ್ತಾರೆ.
ನಮ್ಮ ಪ್ರೇಮವು ವಿಫಲವಾಯಿತೆಂದು ತುಂಬಾ ಜನ ಹೇಳಿದರು. ನನಗೆ ಮಾತ್ರ ಒಂದು ಭಾಷೆಯನ್ನೇ ಕಳೆದುಕೊಂಡಂತೆನಿಸಿತು. ಒಂದು ಕಾಲಕ್ಕೆ ಒಂದು ಕಣ್ಣೋಟದಿಂದ ಅರ್ಥವಾದ ಮನುಷ್ಯರು, ಕೊನೆಗೆ ಒಂದು ವಾಕ್ಯವನ್ನು ಕೂಡಾ ಒಬ್ಬರ ಬಳಿ ಇನ್ನೊಬ್ಬರು ಸೇರಿಸಲಾರದೇಹೋದರು. ಎಲ್ಲಾ ವಿಚ್ಛೇದನಗಳೂ ಕೋರ್ಟಿನೊಳಗೇ ಜರುಗವು. ಕೆಲವು ಊಟದ ನಡುವೆಯೇ ಬರುತ್ತವೆ. ಕೆಲವು ನಿದ್ದೆಯ ಮಂಚದ ಎರಡು ಅಂಚುಗಳ ನಡುವೆ ಜರುಗುತ್ತವೆ. ಕೆಲವು “ಪರವಾಗಿಲ್ಲ” ಎನ್ನೋ ಒಂದೇ ಮಾತಿನೊಳಗೆ ಶಾಶ್ವತವಾಗಿ ನಿಂತುಬಿಡುತ್ತವೆ.
ನೀನು ಹೊರಟು ಹೋದ ನಂತರ ನಿನ್ನ ಬಟ್ಟೆಗಳ ವಾಸನೆಗಿಂತ, ನೀನು ಇರದ ನಿಶ್ಯಬ್ದವೇ ಮನೆಯೊಳಗೆ ಹೆಚ್ಚು ದಿನಗಳಿರುತ್ತವೆ. ನಿಶ್ಯಬ್ದಕ್ಕೆ ಒಂದು ಭಾರವಿರುತ್ತದೆಂದು, ಒಂದು ಖಾಲಿ ಕುರ್ಚಿಕೂಡಾ ಮನುಷ್ಯನನ್ನು ಆಲೋಚನೆಯೊಳಕ್ಕೆ ನೂಕಬಲ್ಲದೆಂದು ಕಲಿತುಕೊಂಡೆನು.
ನೀನು ಹೊರಟುಹೋದಮೇಲೆ ಮನೆಯೊಳಗೆ ಬಹಳ ವಸ್ತುಗಳು ಬದಲಾಗಿವೆ. ಸೋಫಾದ ಜಾಗ ಬದಲಾಗಿದೆ. ಪುಸ್ತಕದ ಸಾಲು ಬದಲಾಗಿವೆ. ಕಪ್ಪುಗಳ ಬಣ್ಣಗಳು ಬದಲಾಗಿವೆ. ನಾನೂ ಕೂಡಾ ಬದಲಾಗಿದ್ದೇನೆಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಈ ಮಳೆ ಮಾತ್ರ ಇಂದಿಗೂ ಕಿಟಕಿ ಬಳಿಯೇ ನಿಂತು ನಿನ್ನನ್ನ ಕೇಳುತ್ತಿದೆ.
“ಆತನ ನೀನು ಮರೆತುಹೋಗಿಲ್ಲ ಅಲ್ಲವಾ”
ನಿನ್ನ ನಾನು ಕ್ಷಮಿಸಿದೆನಾ? ಎಂದು ತುಂಬಾ ಜನ ಕೇಳಿದರು. ವಿಚಿತ್ರವೆನಿಸಿತು. ನಾವು ಒಬ್ಬರನ್ನೊಬ್ಬರು ಕೊಂದುಕೊಳ್ಳಲಿಲ್ಲ. ನಾವು ಒಬ್ಬರನ್ನೊಬ್ಬರು ನಿಧಾನವಾಗಿ ಆಲೋಚಿಸುವುದನ್ನೇ ಬಿಟ್ಟುಬಿಟ್ಟೆವು. ಅದಕ್ಕೆ ಕ್ಷಮಾಪಣೆಗಳು ಇರವು. ಅದಕ್ಕೆ ಪ್ರತಿಧ್ವನಿಗಳು ಮಾತ್ರವೇ ಇರುತ್ತವೆ.
ಈ ದಿನ ಮಳೆಯಲ್ಲಿ ಒಬ್ಬ ಪುಟ್ಟ ಹುಡುಗ ತನ್ನ ತಂದೆಯ ಕೈಯ್ಯನ್ನು ಗಟ್ಟಿಯಾಗಿ ಹಿಡಿದು ರಸ್ತೆ ದಾಟುತ್ತಿದ್ದಾನೆ.ಏತಕೋ,ನಾನು ಕಣ್ಣನ್ನು ತಿರುಗಿಸಿಕೊಂಡೆ. ಕೆಲವು ದೃಶ್ಯಗಳು ಅಸೂಯೆಯನ್ನು ಹುಟ್ಟಿಸವು. ಅವು ಒಂದುಕಾಲಕ್ಕೆ ನಾವು ಕಳೆದುಕೊಂಡ ಭವಿಷ್ಯತ್ತನ್ನು ನೆನಪಿಸುತ್ತವೆ.
ಈ ದಿನ ಮಳೆಯಲ್ಲಿ ಹೊರಗೆ ಹೊರಟೆ. ಕೊಡೆ ತೆಗೆದುಕೊಂಡು ಹೋಗಲಿಲ್ಲ. ಒದ್ದೆಯಾಗಬೇಕೆಂದಲ್ಲ. ಇನ್ನೂ ನನ್ನ ಮೇಲೆ ಮಳೆ ಬಿದ್ದರೆ ನಾನು ನೆನಪಿಸಿಕೊಳ್ಳುತ್ತೇನೇನೋ ತಿಳಿದುಕೊಳ್ಳಲಿಕ್ಕೆ. ಒಂದು ಹನಿಯು ಕೆನ್ನೆ ತಾಗಿತು. ಅದು ನಿನ್ನ ಸ್ಪರ್ಶವಲ್ಲ ಆದರೆ ನನ್ನ ದೇಹವು ಅದನ್ನು ನೆನಪು ಮಾಡಿಕೊಂಡಿತು. ದೇಹಗಳಿಗೆ ನ್ಯಾಯಗಳು ತಿಳಿಯವು. ಅವುಗಳಿಗೆ ಋತುಗಳಷ್ಟೇ ಗೊತ್ತು.
ಈ ಪತ್ರ ನಿನಗೆ ಕಳಿಸದಿರಬಹುದು. ಏಕೆಂದರೆ ಇದು ನಿನ್ನ ಉತ್ತರಕ್ಕಾಗಿ ಬರೆದದ್ದಲ್ಲ. ಒಂದುಕಾಲಕ್ಕೆ “ನಾವು” ಎನ್ನೋ ಪದ ನೋಡಿದ ಈ ಕೈಗಳು, ಈಗ “ನಾನು” ಎನ್ನೋ ಪದವನ್ನೇ ಹೇಗೆ ಬರೆಯುವುದನ್ನು ಕಲಿತಿವೆಯೋ ಹೇಳಿಕೊಳ್ಳಲಿಕ್ಕೆ.
ನಿನಗೆ ಗೊತ್ತಾ? ನಾವು ವಿಚ್ಛೇದನಗೊಂಡ ದಿನ ನಾ ನಿನ್ನನ್ನು ಕಳೆದುಕೊಳ್ಳಲಿಲ್ಲ. ನನ್ನೊಂದಿಗೆ ಕೂಡಿ ಮುದಿತನ ಸೇರಬೇಕಾದ ಒಬ್ಬ ಮನುಷ್ಯನನ್ನ ಕಳಕೊಂಡೆ. ಆ ದುಃಖಕ್ಕೆ ಹೆಸರಿಲ್ಲ. ಅದು ಪ್ರತಿ ಮಳೆಗಾಲದಲ್ಲೂ ಹೊಸದಾಗಿ ಹುಟ್ಟುತ್ತದೆ.
ಆದರೂ…..
ಈ ಪತ್ರಕ್ಕೆ ಉತ್ತರ ಬರೆಯದಿರು. ಒಂದು ವೇಳೆ ಎಂದಾದರೂ ಅರ್ಧರಾತ್ರಿ ಮಳೆಯೊಳಗೆ ಎಚ್ಚರಗೊಂಡು, ಅಕಾರಣವಾಗಿ ಒಂದು ದೊಡ್ಡ ನಿಟ್ಟುಸಿರಿಟ್ಟರೆ,ಅದನ್ನು ವಯಸ್ಸು ಎಂದುಕೊಳ್ಳದಿರು. ಮುಟ್ಟಲಾರದ ಮನುಷ್ಯರು ಕೂಡಾ…. ಚಳಿಯ ಒಂದೇರೀತಿ ಹಂಚಿಕೊಳ್ಳಬಲ್ಲರೆಂದು ಮಳೆಗೆ ಮಾತ್ರ ಗೊತ್ತು. ಕೆಲವು ಪ್ರೇಮಗಳು ದೇಹವನ್ನು ಬಿಟ್ಟು ಹೊರಟುಹೋಗುತ್ತವೆ. ಕೆಲವು ಪ್ರೇಮಗಳು ದೇಹವೇ ಆಗಿಹೋಗುತ್ತವೆ. ಅವುಗಳನ್ನು ಕೋರ್ಟುಗಳು ಅಗಲಿಸಲಾರವು. ಮಳೆ ಮಾತ್ರ ಪ್ರತಿ ವರ್ಷ ನೆನಪು ಮಾಡುತ್ತಲೇ ಇರುತ್ತವೆ.
ಈ ರಾತ್ರಿ ನಿನ್ನ ಕಿಟಕಿ ಬಳಿ ಕೂಡಾ ಮಳೆ ಬಂದಿದ್ದರೆ, ಒಂದುಸಲ ಆ ಗಾಜಿನ ಮೇಲೆ ಕೈ ಇಡು. ಇಲ್ಲಿ ನಾನೂ ಅದನ್ನೇ ಮಾಡುತ್ತೇನೆ.
ಇಂತಿ
………
ಒಂದು ಕಾಲಕ್ಕೆ ನಿನ್ನೊಂದಿಗೆ ಕೂಡಿ
ಮಳೆಗಾಲವನ್ನು ಹಂಚಿಕೊಂಡ ನಾನು.

ತೆಲುಗು ಮೂಲ: ಮೆರ್ಸಿ ಮಾರ್ಗರೇಟ್‌

ಕನ್ನಡಕ್ಕೆ :ಡಾ. ಶಿವಕುಮಾರ್ ಕಂಪ್ಲಿ, ದಾವಣಗೆರೆ

Leave a Reply

Your email address will not be published. Required fields are marked *