ಇಂಗಳಗಿ ಮುಖ್ಯ ಗುರು ಬಿ.ಲಕ್ಷ್ಮಿದೇವಿ ಅವರಿಗೆ ಬೀಳ್ಕೊಡುಗೆ: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು -ಬಿ ಕೆ ಹೇಮರೆಡ್ಡಿ

ಹೊಸಪೇಟೆ, ಆ.1:ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ ಕೆ ಹೇಮರೆಡ್ಡಿ ಅವರು ಹೇಳಿದರು.

ತಾಲೂಕಿನ ಇಂಗಳಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಬಿ.ಲಕ್ಷ್ಮಿದೇವಿ ಅವರು ಶುಕ್ರವಾರ ವಯೋನಿವೃತ್ತಿಯಾದ  ಹಿನ್ನಲೆಯಲ್ಲಿ  ಶಾಲಾ ಆವರಣದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೊಸಪೇಟೆಯ ಬಾಪೂಜಿ ಶಾಲೆಯಲ್ಲಿ 33 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ಬಿ.ಲಕ್ಷ್ಮಿದೇವಿ ಅವರು ಶಿಸ್ತು, ಶ್ರದ್ಧೆಯಿಂದ ಮಕ್ಕಳಿಗೆ ಪಾಠ ಮಾಡಿದ್ದರಿಂದ ಮೂರು ದಶಕಗಳ ಕಾಲ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಮಾತನಾಡಿ ಅಧ್ಯಾಪಕ ವೃತ್ತಿ ಅತ್ಯಂತ ಶ್ರೇಷ್ಟ ವಾದದ್ದು.  ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಸತ್ಪ್ರಜೆಗಳಾಗಿ ರೂಪಿಸುತ್ತಾರೆ ಎಂದು ತಿಳಿಸಿದರು.

ಹಂಪಾಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ‌ ತರಗತಿವರೆಗೆ ಸಹಪಾಠಿಯಾಗಿದ್ದ ಲಕ್ಷ್ಮಿದೇವಿ ಅವರು ವಿದ್ಯಾರ್ಥಿಯಾಗಿದ್ದಾಗಲೂ ಶಿಸ್ತು,. ಸರಳ ಸಜ್ಜನಿಕೆ ರೂಢಿಸಿಕೊಂಡಿದ್ದರು ಎಂದು  ಬಾಲ್ಯದ ದಿನಗಳನ್ನು ಸ್ಮರಿಸಿದರು.

ಹಂಪಾಪಟ್ಟಣ ಗ್ರಾಮದ ಎಲ್ಲರ ಪ್ರೀತಿಯ  ‘ತಂಗಿ’ ಎಂದೇ ಗುರುತಿಸಿಕೊಂಡಿದ್ದ ಲಕ್ಷ್ಮಿದೇವಿ ಅವರು ತಮ್ಮ ಸಮರ್ಪಣಾ ಭಾವದಿಂದ  ಯಶಸ್ವಿಯಾಗಿ ಶಿಕ್ಷಕ ವೃತ್ತಿಯನ್ನು ಪೂರೈಸಿರುವುದು ನಮಗೆಲ್ಲಾ ಹೆಮ್ಮೆ ಎಂದರು.                                      ಹಂಪಾಪಟ್ಟಣದ ಆರ್ ಎಂ ಪಿ ವೈದ್ಯ ಡಾ. ಬೇವೂರು ಫಕ್ಕೀರಪ್ಪ ಮತ್ತು ಬುದ್ದಿವಂತಮ್ಮ ಅವರು  ಬಡವರ ಸೇವೆಯಲ್ಲಿ ಸಂತಸ ಕಾಣುತ್ತಿದ್ದರು. ಲಕ್ಷ್ಮಿದೇವಿ ಅವರಲ್ಲೂ ತಂದೆ ತಾಯಿ ಅವರ ಸದ್ಗುಣಗಳಿರುವುದರಿಂದ   ಒಂದೇ ಶಾಲೆಯ ವಿದ್ಯಾರ್ಥಿಗಳು, ಸಹೋದ್ಯೋಗಿಗಳ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಂಪಾಪಟ್ಟಣ ಸರಕಾರಿ ಪ್ರಾಥಮಿಕ ಶಾಲೆಯ ಸಹಪಾಠಿಗಳಾದ ಕೆ. ರಾಮಣ್ಣ, ಸಿ.ಮಂಜುನಾಥ ಅವರು ಬಿ. ಲಕ್ಷ್ಮಿದೇವಿ ಅವರನ್ನು ಸತ್ಕರಿಸಿದರು.

ಪ್ರಾಥಮಿಕ ಶಾಲೆಯ ಮತ್ತೋರ್ವ ಸಹಪಾಠಿ ಯೋಗ ಪಟು ಕೆ. ರಾಮಣ್ಣ ಮಾತನಾಡಿ ಮೂವತ್ಮೂರು ವರ್ಷಗಳ ಕಾಲ ಸರಕಾರಿ ಸೇವೆಯಲ್ಲಿ ಸಣ್ಣ ಲೋಪವಾಗದಂತೆ ಕಾರ್ಯನಿರ್ವಹಿಸಿರುವ ಲಕ್ಷ್ಮಿದೇವಿ ಅವರು ನಮ್ಮ ಗ್ರಾಮದ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.

ಸುದೀರ್ಘ 33 ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಲಕ್ಷ್ಮಿದೇವಿ ಅವರು ನಿವೃತ್ತಿ ದಿನ ಸಂಜೆ  ರವೀಂದ್ರ ನಾಥ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಪುತ್ರಿ ಸಾಫ್ಟ್‌ವೇರ್ ಇಂಜಿನಿಯರ್ ಅನಿತಾ ಮಾತನಾಡಿ ತಮ್ಮ ತಾಯಿಯವರಿಗೆ ಕುಟುಂಬಕ್ಕಿಂತ ಶಾಲೆಯೇ ಹೆಚ್ಚು ಆದ್ಯತೆಯಾಗಿತ್ತು. ಏನೇ ಒತ್ತಡವಿರಲಿ 9 ಗಂಟೆಗೆ ಮನೆ ಬಿಡುತ್ತಿದ್ದರು.  ತಮ್ಮ 33 ವರ್ಷಗಳ ಕರ್ತವ್ಯ ನಿರ್ವಹಣೆಯಲ್ಲಿ ಶಾಲೆ ಮತ್ತು ವಿದ್ಯಾರ್ಥಿಗಳ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಇವರ ಹಲವಾರು ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿದರು.
ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಕಡ್ಲಿ ವೀರಭದ್ರೇಶ,  ರಾಜ್ಯ ಪರಿಷತ್ ಸದಸ್ಯ ಕೆ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಟಿ ರಾಜು,  ಸಂಘದ ಸದಸ್ಯೆ ಸುಧಾದೇವಿ ಹಾಗೂ ಪಿಎಂಶ್ರೀ ಶಾಲೆಯ ಮುಖ್ಯ ಗುರು ಜ್ಯೋತಿ ನಾಯಕ್, ಪ್ರಬಾರಿ ಮುಖ್ಯ ಗುರು ಆರ್. ರವೀಂದ್ರನಾಥ್ ಮತ್ತು ವಿದ್ಯಾರ್ಥಿಗಳು ಮಾತನಾಡಿದರು.

ಕರ್ತವ್ಯದ ಕೊನೆಯ ದಿನ ಲಕ್ಷ್ಮಿದೇವಿ ಅವರು ತಮಗೆ ಸುದೀರ್ಘವಾಗಿ ೩೩ ವರ್ಷ ಸೇವೆ ಸಲ್ಲಿಸಲು ಅವಕಾಶ ನೀಡಿದ ಶಿಕ್ಷಣ ಇಲಾಖೆ ಮತ್ತು ಶಾಲೆಗೆ ನಮಸ್ಕರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.

ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ಮಾಳಗಿ,  ಪಟೇಲ ಶಾಲೆಯ ಬಡ್ತಿ ಮುಖ್ಯ ಗುರುಗಳಾದ ಕೆ. ಗೀತಾ, ನಿವೃತ್ತಿ ಶಿಕ್ಷಕಿಯಾದ ಎಸ್ ರಹೇನ,  ಬಂಧು ಪೊಲೀಸ್ ಇಲಾಖೆಯ ಅನಿಲ್ ಕುಮಾರ್, ರಾಧ ಅನಿಲ್ ಕುಮಾರ್, ಪುತ್ರಿ ಇಂ. ಕಲ್ಪನಾ, ಪುತ್ರ ಹೇಮಂತ್ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.      ವಿವಿಧ ಶಾಲೆಗಳ ಬಡ್ತಿ ಮುಖ್ಯ ಗುರುಗಳು,  ಸಹ ಶಿಕ್ಷಕರು, ಹಿತೈಷಿಗಳು,  ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.   ರವೀಂದ್ರನಾಥ ಅವರು ಸ್ವಾಗತಿಸಿ, ನಿರೂಪಿಸಿದರು. ಸಹ ಶಿಕ್ಷಕಿಯರಾದ ಆಶಾ ಗೀತಾ,  ಕಸ್ತೂರಿ ಎಂ, ಸುಮತಿ ಕೆ, ಮಮುದಾ ಬೇಗಂ, ಮತ್ತಿತರರು ನಿರ್ವಹಿಸಿದರು.  ಕಳಕಪ್ಪ ವಡೆಗೋಳ ವಂದಿಸಿದರು.

—-

Leave a Reply

Your email address will not be published. Required fields are marked *