ಅನುದಿನ ಕವನ-೮೮೮, ಕವಿಯಿತ್ರಿ: ಅಕ್ಷತಾ ಎನ್ ಗೌಡ, ಬೆಂಗಳೂರು

ಬೆರಳ ದಂಡೆ ಮೊಗ್ಗಾಗಿ ಅರಳುವ ಮುನ್ನ
ಕಂಪು ಹಡರುವ ಮುನ್ನ
ನಶೆಯೇರಿ ಅವನ ತೋಳ ತೆಕ್ಕೆಗೆ ಬೀಳುವ
ತುಸುವೇ ಮುನ್ನ..!!

ಪ್ರೀತಿಸ ಬೇಡವೇ
ಆರಾಧಿಸಬೇಡವೇ
ನಿನ್ನ ಕಂಗಳಲ್ಲಿ ತುಂಬಿಕೊಳ್ಳಬೇಡವೇ
ನೋವು ನಿನಗೆ ಬೇಡ ಕಣೇ,
ಎಂದವನೇ
ಕೈಯನ್ನ ಬಿಗಿಯಾಗಿ ಹಿಡಿದು
ಎಚ್ಚರಿಸುತ್ತಾನೆ..!!

ನೋವಾದದ್ದು ಕೈಗಳಿಗೆ
ನಾಡಿಗಳು ಬಡಿದುಕೊಳ್ಳುವ ಮುನ್ನ
ಅರವಳಿಕೆಯಲಿ ತೇಲಿದಂತಿತ್ತು
ಹೃದಯ ಮಾತ್ರ ಬಿರಿಯುತ್ತಿತ್ತು
ಎದೆಯ ಒಳಗೊಳಗೇ…

ಸದ್ದು ಮಾಡದೇ ಹೂಂ ಎನ್ನಬೇಕಾಯಿತು
ಹೊತ್ತಿ ಉರಿಯುತ್ತಿದ್ದ
ಅವನ ಕಣ್ಣುಗಳ ನಂದಿಸಲು,
ಅದರಗಳನ್ನೇಕೆ ಬೆರೆಯಬಿಟ್ಟನೋ ಗೊತ್ತಿಲ್ಲ
ದಾಳಿಗಿಳಿಯುವ ಮುನ್ನ
ಶಾಂತಿ ಸಂಧಾನವೇಕೋ ಗೊತ್ತಾಗಲಿಲ್ಲ
ಆಗಿನಿಂದ ಉಸಿರಿನ ಏರಿಳಿತಗಳು
ಅಂಕೆಗೆ ಸಿಗಲಿಲ್ಲ….

ಅಂತೂ ಅವನ ಭುಜಕ್ಕೊರಗಿ ಕೂತು
ಮುದ್ದಾದ ಬಾಳ ಪುಟದಲ್ಲೀಗ ಬರೆಯುವೆ
ಅವನದೇ ಹೆಸರ ಮುದ್ದುಮುದ್ದಾಗಿ
ಅವನಿಗೇ ತಿಳಿಯುವ ಮುನ್ನ…..

-ಅಕ್ಷತಾ ಎನ್ ಗೌಡ, ಬೆಂಗಳೂರು
*****

Leave a Reply

Your email address will not be published. Required fields are marked *