ಅನುದಿನ ಕವನ-೯೦೩, ಕವಿ: ನಾಗೇಶ ನಾಯಕ್, ಸವದತ್ತಿ, ಕಾವ್ಯ ಪ್ರಕಾರ: ಗಝಲ್

ಗಝಲ್

ಇಲ್ಲಿ ನೀನು ಯಾರನ್ನೂ ಮೆಚ್ಚಿಸಬೇಕಿಲ್ಲ ಕಳಚಿಬಿಡು ಮುಖವಾಡ
ಇಲ್ಲಿ ಯಾರ ಹೊಗಳಿಕೆಗೂ ಕಾಯಬೇಕಿಲ್ಲ ಕಳಚಿಬಿಡು ಮುಖವಾಡ

ನೂರು ಜನ ನೂರು ತರ ನುಡಿಯುವರು ಚಿಂತೆ ಬೇಡ
ಸೋಗು ಹಾಕಿ ಸಲಾಮು ಹೊಡೆಯಬೇಕಿಲ್ಲ ಕಳಚಿಬಿಡು ಮುಖವಾಡ

ನಿನ್ನಾತ್ಮಸಾಕ್ಷಿಯ ಕೊಂದುಕೊಂಡು ನಟನೆ ಮಾಡಿ ಬದುಕಬೇಕೇ
ಯಾರ ಭಿಕ್ಷೆಗೂ ಕೈ ಚಾಚಬೇಕಿಲ್ಲ ಕಳಚಿಬಿಡು ಮುಖವಾಡ

ಮೂರು ದಿನದ ಸಂತೆಯಲ್ಲಿ ನಿನ್ನತನದ ನಡೆಗೇ ಗೆಲುವು
ಯಾರ ನೆರಳಿಗೂ ನಮಿಸಿ ಓಲೈಸಬೇಕಿಲ್ಲ ಕಳಚಿಬಿಡು ಮುಖವಾಡ

ಉಸಿರ ಕೊನೆಯವರೆಗೂ ಕೆಸರು ಮೆತ್ತದಂತೆ ಜೀವಿಸಬೇಕು
ಯಾರು ಸಾಥ್ ನೀಡದಿದ್ದರೂ ಹೆದರಬೇಕಿಲ್ಲ ಕಳಚಿಬಿಡು ಮುಖವಾಡ


-ನಾಗೇಶ್ ಜೆ ನಾಯಕ, ಸವದತ್ತಿ
*****

Leave a Reply

Your email address will not be published. Required fields are marked *