ಅನುದಿನ ಕವನ-೧೧೩೩, ಕವಯಿತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್

ಗಝಲ್

ಕಡಲ ಒಡಲಲಿ ಮೀಯುವದ ತಡೆದು
ಒಡಲನೆ ಕಡಲಾಗಿಸಿ ಮೀಯುತಿರುವೆಯಲ್ಲ
ಸರಸಿ ಸರೋವರದಿ ಸರಸಕ್ಕೆ ಕರೆಯುತಲಿರಲು
ವಿರಹದ ಬಿಸಿಯನೇರಿಸಿ ಖುಷಿ ಪಡುವೆಯಲ್ಲ

ಅರ್ಪಣಾ ತರ್ಪಣದಿ ಒಪ್ಪ ಓರಣದಿಂದ
ಅರ್ಪಿಸಲು ಅವಸರದಿ ಕಾಯುತಿರುವೆಯೇಕೆ
ಅಪ್ಪಿ ತಪ್ಪಿಯು ಅಪ್ಪಲಾರದೆ ಅನುಮಾನಿಸಿ
ಅರಸಿ ಐಸಿರಿಯ ಅಸಡ್ಡೆಯಲಿ ಕಾಣುವೆಯಲ್ಲ

ನಲಿಯುತಿಹ ಹೃದಯದಲಿ ಒಲಿದಂತೆ ನಟಿಸಿ
ನಗುವಿನ ಮೊಗಹೊತ್ತು ನಲಿಯುತಲಿರಲು
ನೀರವದ ತಾಣದಲಿ ನೀರಸ ತೋರುತಲಿ
ನಿನ್ನಾಸೆ ಮನಬಿಚ್ಚಿ ನಿಡುನಿಜವ ಹೇಳುವೆಯಲ್ಲ

ಕರುಣೆಯ ತೋರದೆಯೆ ಕನಿಕರಿಸಿ ಕಾಣದೆಯೆ
ಕನಸನು ಕದ್ದು ಕಾಣುತಲಿರಲು
ಕೆರಳಿದ ಮನಕಿಂದು ಕಿಂಚಿತ್ತು ಅಣಿಗೊಡದೆ
ಕಾತುರವ ಕಡೆಗಣಿಸೋ ಕಿರಣವ ಬೀರುವೆಯಲ್ಲ

ತೈಲನೆರದಿಹ ಹಣತೆ ಬೆಳಗಲು ತಾಬಯಸಿ
ತಿರೆಯಲುತ್ತಮನ ರತುನ ಬಯಸುತಲಿರಲು
ತೋಷ ತೋರುವ ಬದಲು ವಿಷಾದೊಡನೆ
ಬಂದ ಹಾದಿಯ ಹಿಡಿದು ಹೊರಡುವೆಯಲ್ಲ

-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
——

Leave a Reply

Your email address will not be published. Required fields are marked *