ಅನುದಿನ ಕವನ-೧೨೭೩, ಕವಿ: ಶಂಕರಾನಂದ ಹೆಬ್ಬಾಳ, ಇಳಕಲ್ಲು, ಕಾವ್ಯ ಪ್ರಕಾರ: ಗಜಲ್

ಗಜಲ್

ಕಣ್ಣೋಟದಲಿ ಮನಸೆಳೆದು ಹೃದಯ
ಕೊಲ್ಲುವೆಯಲ್ಲ ರಮಣಿ
ಬಿನ್ನಣವನು ತೋರುತಲಿ ನಗುವನು
ಚೆಲ್ಲುವೆಯಲ್ಲ ರಮಣಿ

ಅಗಣಿತ ಭಾವಗಳಿಗೆ ಮಣೆಹಾಕಿ
ಪ್ರೇಮತಲ್ಪದಲಿ ಕೂರಿಸಿದೆಯೇಕೆ
ಅಗಲದಂತೆ ವಲ್ಲಭನ ಕನಸುಗಳಲಿ
ನಿಲ್ಲುವೆಯಲ್ಲ ರಮಣಿ

ಅನುಪಮ ಸೌಂದರ್ಯದ ಗಣಿಯಾಗಿ
ಮೋಹಕತೆ ತೋರಿರುವೆ
ಕನಸುಗಳ ಕದಿಯುತ ನಿದಿರೆಯನು
ಮೆಲ್ಲುವೆಯಲ್ಲ ರಮಣಿ

ತಂಗಾಳಿಯಲಿ ಘಲ್ ಘಲ್ ಗೆಜ್ಜೆನಾದ
ಹರಿಸುತ ಕರೆವೆಯಲ್ಲ
ಸಿಂಗಾರದ ಸಿರಿಯಾಗಿ ಲೋಕವನೆ
ಗೆಲ್ಲುವೆಯಲ್ಲ ರಮಣಿ

ಒಲವಿನ ಮೇನೆಯೊಳು ಆಗಂತುಕನ
ತೋಳಿನಲಿ ಅಪ್ಪುವೆಯಲ್ಲ
ಅಭಿನವನ ಮಹಾಕಾವ್ಯಕೆ ಪದವಾಗಿ
ಸಲ್ಲುವೆಯಲ್ಲ ರಮಣಿ

-ಶಂಕರಾನಂದ ಹೆಬ್ಬಾಳ, ಇಳಕಲ್ಲು
—–

Leave a Reply

Your email address will not be published. Required fields are marked *