ಅನುದಿನ‌ ಕವನ-೧೩೬೧, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ, ಕಾವ್ಯ ಪ್ರಕಾರ: ಗಜಲ್

ಗಜಲ್

ಹರಿತವಾದ ಚೂರಿಗಳಿಗಿಂತ ಮಾತಿನ ಮೊನೆಗಳು ತುಂಬಾ ನೋವು ಸಾಕಿ
ಸುಡುವ ಬೆಂಕಿಗಿಂತ ಕ್ರೋಧದ ಕಣ್ಣೋಟಗಳು ತುಂಬಾ ನೋವು ಸಾಕಿ

ಎಲ್ಲೆಡೆಯೂ ಪರಿಶುದ್ಧ ಗೆಳೆತನದ ಸುವಾಸನೆಯನೇ ಬಯಸುತ್ತ ಬಂದೆ
ಹೆಗಲ ಮೇಲೆ ಕೈ ಹಾಕಿ ಕೊರಳ ಬಿಗಿವ ಬೆರಳುಗಳು ತುಂಬಾ ನೋವು ಸಾಕಿ

ಕನ್ನಡಿಯಂತೆ ಹೃದಯವ ತೆರೆದುಕೊಂಡೇ ಬದುಕಿದೆ ಬದುಕುತ್ತಲೇ ಬಂದೆ
ಒಳಗೆ ಬಂದು ಹೋದವರೆಲ್ಲರ ಕುಹಕ ನಗೆಗಳು ತುಂಬಾ ನೋವು ಸಾಕಿ

ಅನ್ಯರಿಗೆ ಪರಿಶುದ್ಧ ಹಾಲಿನಂತೆಯೇ ಸಿಹಿಯಾಗಿರಬೇಕೆಂದು ಬಯಸುತ್ತ ಬಂದೆ
ಸಿಹಿ ಕುಡಿದು ಸಾಕಾದಮೇಲೆ ಹಿಂಡುವ ಹುಳಿಯ ಹನಿಗಳು ತುಂಬಾ ನೋವು ಸಾಕಿ

ನೋವಿನಲ್ಲೇ ನಗುತ್ತ ಬದುಕಬೇಕೆಂದೇ ನಗು ನಗುತ್ತಲೇ ನಗುವ ಚೆಲ್ಲಿದೆ
ಸಿದ್ಧನ ನಗುವ ಹೂಗಳ ಮೇಲೆ ಹೊಸಕಿ ನಡೆವ ನಡೆಗಳು ತುಂಬಾ ನೋವು ಸಾಕಿ

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
—–

Leave a Reply

Your email address will not be published. Required fields are marked *