ವಿಧಾನಮಂಡಲದ ಎಸ್‌ಸಿ-ಎಸ್‌ಟಿ ಕಲ್ಯಾಣ ಸಮಿತಿಯಿಂದ ಬಳ್ಳಾರಿ ಜಿಲ್ಲಾ ಪ್ರಗತಿ ಪರಿಶೀಲನೆ: ಬಡ-ಶೋಷಿತ ಸಮುದಾಯದವರ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು: ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ

ಬಳ್ಳಾರಿ,ಸೆ.27: ಸಮಾಜದಲ್ಲಿ ಶೋಷಣೆಗೊಳಗಾದ ಪರಿಶಿಷ್ಟ ಸಮುದಾಯ ವರ್ಗದವರ ಅಭಿವೃದ್ಧಿಗೆ ಅವರಿಗಾಗಿಯೇ ಇರುವ ಯೋಜನೆಗಳನ್ನು ಸಕಾಲದಲ್ಲಿ ತಲುಪಿಸುವ ಮೂಲಕ ಪರಿಶಿಷ್ಟ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಬದುಕು ರೂಪಿಸುವ ಕೆಲಸವಾಗಬೇಕು ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಶುಕ್ರವಾರ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ವಿವಿಧ ಇಲಾಖೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಏರ್ಪಡಿಸಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತ್ಯಂತ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದೀರಿ; ಸಾಮಾಜಿಕ ಕಳಕಳಿಯ ಜವಾಬ್ದಾರಿ ಹೊಂದಬೇಕು. ಪರಿಶಿಷ್ಟ ಸಮುದಾಯದವರಿಗೂ ಸಾಮಾಜಿಕ ಜಗತ್ತಿನಲ್ಲಿ ಸಹಬಾಳ್ವೆ ನಡೆಸಲು ಅವಕಾಶ ನೀಡಬೇಕು ಎಂದು ತಿಳಿಸಿದರು.
ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಇಲಾಖೆ ಕಚೇರಿಗಳಲ್ಲಿಯೂ ಮೀಸಲಾತಿ ಉದ್ಯೋಗಾವಕಾಶ ಕಲ್ಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.


ಜಿಲ್ಲೆಯಲ್ಲಿನ ಮಾಜಿ ದೇವದಾಸಿಯರ ಪುನರ್ವಸತಿಗೆ ಕ್ರಮ ವಹಿಸಬೇಕು. ವಸತಿ ರಹಿತರಿಗೆ ವಸತಿ ಯೋಜನೆಯಡಿ ಮನೆ ನೀಡಬೇಕು. ನಿವೇಶನ ಇಲ್ಲದಿದ್ದಲ್ಲಿ ಸರ್ಕಾರವೇ ಖರೀದಿಸಿ ಮಾಜಿ ದೇವದಾಸಿಯರಿಗೆ ನೀಡಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ದೇವದಾಸಿಯರ ಏಳ್ಗೆಗಾಗಿ ರೂಪಿಸಿದ ಕಾರ್ಯಯೋಜನೆಗಳ ಬಗ್ಗೆ ಪೂರಕ ಮಾಹಿತಿಯೊಂದಿಗೆ ಸಮಿತಿಗೆ ವರದಿ ನೀಡಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪರಿಶಿಷ್ಟರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಕಲ್ಪಿಸಬೇಕು. ಜೆಜೆಎಂ ಕಾಮಗಾರಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ ಪರಿಶಿಷ್ಟರಿಗೆ ಸಮುದಾಯ ಭವನಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಶುಲ್ಕ ನೆಪವೊಡ್ಡಿ ಪ್ರವೇಶ ನಿರಾಕರಿಸುವಂತಿಲ್ಲ. ಪ್ರವೇಶ ನಿರಾಕರಿಸಿದಲ್ಲಿ ಅಂತಹ ಕಾಲೇಜು-ಸಂಸ್ಥೆಗಳ ವಿರುದ್ದ ಕ್ರಮವಹಿಸಬೇಕು ಡಿಡಿಪಿಯು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಸೆಸೆಲ್ಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುನ್ನಲೆಗೆ ತರಲು ಗ್ರಾಮೀಣ ಭಾಗದಲ್ಲಿ ಎಸ್.ಡಿ.ಎಂ.ಸಿ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಸರ್ಕಾರದ ಅನುದಾನ ಹೊರತಾಗಿ ಸ್ಥಳೀಯವಾಗಿ ಅನುದಾನ ಸಂಗ್ರಹಿಸಿ ಗುಣಮಟ್ಟದ ಶಿಕ್ಷಣ ನೀಡುವತ್ತ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.
2011ರ ಜನಗಣತಿ ಪ್ರಕಾರ ಬಳ್ಳಾರಿ ಜಿಲ್ಲೆಯಲ್ಲಿನ ಒಟ್ಟು 14,00,970 ಜನಸಂಖ್ಯೆ ಪೈಕಿ ಪರಿಶಿಷ್ಟ ಜಾತಿಯಲ್ಲಿ 1,33,180 ಪುರುಷರು ಮತ್ತು 1,34,213 ಮಹಿಳೆಯರು ಇದ್ದಾರೆ. ಪರಿಶಿಷ್ಟ ಪಂಗಡದಲ್ಲಿ 1,31,119 ಪುರುಷರು ಮತ್ತು 1,31,553 ಮಹಿಳೆಯರು ಇದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 65 ದೌರ್ಜನ್ಯ ಪ್ರಕರಣಗಳು ನಡೆದಿದ್ದು, 127 ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಎಸ್ಸಿ ಮತ್ತು ಎಸ್ಟಿ ಜನರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಇರುವ ಗೃಹಲಕ್ಷ್ಮಿ ಯೋಜನೆಯ ಜಾರಿಗೆ ಕಾಳಜಿ ವಹಿಸಬೇಕು. ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಲುಪಿ ಗೃಹಲಕ್ಷಿ ಯೋಜನೆಯ ಅನುಷ್ಠಾನದಲ್ಲಿ ಉತ್ತಮ ಸಾಧನೆ ತೋರೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.


ಅರಣ್ಯ ರಕ್ಷಾ ಸಮಿತಿ ಸ್ಥಾಪಿಸಿ: ಜಿಲ್ಲೆಯ ಆರಣ್ಯ ಪ್ರದೇಶದ ಅರಣ್ಯ ವಾಸಿಗಳಿಗೆ ಸಂಬಂಧಪಟ್ಟಂತೆ ಪುನರ್ವಸತಿ ಯೋಜನೆಯಡಿ ರಚಿಸಬೇಕಾಗಿದ್ದ ರಕ್ಷಣಾ ಸಮಿತಿ ರಚಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಿ.ಎಂ.ನರೇಂದ್ರ ಸ್ವಾಮಿ ಅವರು, ಸಮಿತಿ ರಚಿಸದೆ ಹೋದರೆ ಅವರಿಗೆ ಹೇಗೆ ಸೌಲಭ್ಯ ನೀಡುವುದು ಎಂದು ಪ್ರಶ್ನಿಸಿ ಕೂಡಲೇ ಅರಣ್ಯ ಇಲಾಖೆ ಸಮಿತಿ ರಚಿಸಿ ಸಮಿತಿಗೆ ವರದಿ ಸಲ್ಲಿಸಬೇಕು. ಅಲ್ಲದೆ ಅರಣ್ಯದಲ್ಲಿನ ಪಟ್ಟಾ ಜಮೀನಿಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಅರಣ್ಯ ಹಕ್ಕು ಸಮಿತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು ಎಂದರು.
ಗುತ್ತಿಗೆಯಲ್ಲಿ ಮೀಸಲಾತಿ:
ಲೋಕೋಪಯೋಗಿ, ನೀರಾವರಿ, ಜೆಸ್ಕಾಂ, ಪಿ.ಆರ್.ಇ.ಡಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳುವ ಸಿವಿಲ್, ಮೂಲಸೌಕರ್ಯ ಕಾಮಗಾರಿಗಳ ಪೈಕಿ 1 ಕೋಟಿ ರೂ. ವರೆಗಿನ ಕಾಮಗಾರಿಗಳಿಗೆ ಎಸ್‌ಸಿ ಮತ್ತು ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ಅನ್ವಯ ಗುತ್ತಿಗೆ ನೀಡಲು ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ವಿವಿಧ ಕಾಮಗಾರಿಗಳನ್ನು ಕ್ಲಬ್ ಮಾಡಿ ಪ್ಯಾಕೇಜ್ ಆಧಾರದ ಮೇಲೆ ಟೆಂಡರ್ ಕರೆಯುತ್ತಿರುವುದಿರಂದ ಈ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿಯಿಂದ ವಂಚಿಸಲಾಗುತ್ತಿದೆ. ಕೂಡಲೆ ಇದನ್ನು ಸರಿಪಡಿಸಿ ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ವಿವಿಧ ಇಲಾಖೆಗಳ ಎಲ್ಲಾ ಇಂಜಿನಿರ‍್ಸ್ಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳು ಎಸ್‌ಸಿ, ಎಸ್‌ಟಿ ವಸತಿನಿಲಯಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು. ಅಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಗುಣಮಟ್ಟದ ಆಹಾರ ಪೂರೈಕೆಯಾಗಬೇಕು. ಮಕ್ಕಳು ಕುಟುಂಬ ತೊರೆದು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ನಲ್ಲಿರುತ್ತಾರೆ. ಭೇಟಿ ನೀಡುವುದರಿಂದ, ಅಧಿಕಾರಿಗಳು ನಮ್ಮ ಜೊತೆ ಇದ್ದಾರೆ; ಸರ್ಕಾರವು ನಮ್ಮ ಜೊತೆಗಿದೆ ಎಂಬ ಭಾವನೆ ಮೂಡುತ್ತದೆ. ಅಧಿಕಾರಿಗಳು ಮಕ್ಕಳಿಗೆ ನೈತಿಕ ಬಲ ತುಂಬುವ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಕೃಷಿ, ಪಶು ಸಂಗೋಪನಾ, ಇಂಧನ, ಮೀನುಗಾರಿಕೆ, ಸಹಕಾರ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಡಿಯ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ವಿಧಾನಸಭಾ ಸದಸ್ಯರು ಹಾಗೂ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಸದಸ್ಯರಾದ ಬಿ.ಜಿ.ಗೋವಿಂದಪ್ಪ, ಐಹೊಳೆ ದುರ್ಯೋಧನ, ಕೃಷ್ಣ ನಾಯಕ, ಕರೆಮ್ಮ, ಶಾಂತರಾಮ್ ಬುಡ್ನ ಸಿದ್ದಿ, ಜಗದೇವ್ ಗುತ್ತೇದಾರ್ ಮತ್ತು ಕರ್ನಾಟಕ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಪಿ.ಸೀನ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
———-

Leave a Reply

Your email address will not be published. Required fields are marked *