ಬೆಂಗಳೂರು, ಅ.5: ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ನಡೆದ ಹಲ್ಲೆಯ ಘಟನೆಗಳನ್ನು ಕರ್ನಾಟಕ ಪತ್ರಕರ್ತೆಯರ ಸಂಘ ಬಲವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಡಾ. ಆರ್. ಪೂರ್ಣಿಮಾ ಹಾಗೂ ಕಾರ್ಯದರ್ಶಿ ಮಾಲತಿ ಭಟ್ ಅವರು, ಪ್ರತಿಭಟನೆ ಸಂದರ್ಭದಲ್ಲಿ ಪತ್ರಕರ್ತೆಯೊಬ್ಬರನ್ನು ಪೊಲೀಸ್ ಅಧಿಕಾರಿಯೊಬ್ಬರು ಅನುಚಿತವಾಗಿ ಎಳೆದಾಡಿ, ಲೈಂಗಿಕ ಕಿರುಕುಳ ನೀಡಿರುವುದು ಅಕ್ಷಮ್ಯ. ಆ ಅಧಿಕಾರಿಯ ವಿರುದ್ಧ ದೂರು ದಾಖಲಿಸಲು ಹೋದ ಪತ್ರಕರ್ತೆಯನ್ನು ಪೊಲೀಸರು ಗಂಟೆಗಟ್ಟಲೇ ಕಾಯಿಸಿ, ಎಫ್ ಐ ಆರ್ ದಾಖಲಿಸಲು ಹಿಂದೇಟು ಹಾಕಿರುವುದು ಖಂಡನೀಯ. ಕೂಡಲೇ ಆ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಘದ ಪರವಾಗಿ ಒತ್ತಾಯಿಸಿದ್ದಾರೆ.
ಅಧಿಕೃತವಾದ ಗುರುತುಪತ್ರಗಳನ್ನು ಹೊಂದಿದ್ದ ಸ್ವತಂತ್ರ ಮಾಧ್ಯಮಗಳು ಹಾಗೂ ಡಿಜಿಟಲ್ ಮಾಧ್ಯಮದ ಪತ್ರಕರ್ತರೊಂದಿಗೆ ಪೊಲೀಸರು ಹಿಂಸಾತ್ಮಕವಾಗಿ ವರ್ತಿಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರ ಜೊತೆ ಕೆಲ ಪತ್ರಕರ್ತರನ್ನು ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸರ ವರ್ತನೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೀಟ್ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿ ಕಳೆದ ತಿಂಗಳು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವರದಿಗಾಗಿ ತೆರಳಿದ್ದ ಪತ್ರಕರ್ತೆಯರ ಮೇಲೂ ಪೊಲೀಸರು ಇದೇ ರೀತಿಯ ಹಲ್ಲೆ ನಡೆಸಿದ್ದರು. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಕರ್ನಾಟಕ ಪತ್ರಕರ್ತೆಯರ ಸಂಘ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘ ಆಗ್ರಹಿಸಿದೆ.
