ಅನುದಿನ ಕವನ-೧೪೮೯, ಕವಯತ್ರಿ: ಎಚ್. ಎಸ್. ಮುಕ್ತಾಯಕ್ಕ, ರಾಯಚೂರು

ನನ್ನ ಜನುಮದಿನಕ್ಕೆ ನಾನು ನನಗಾಗಿ ಬರೆದ ನನ್ನ ಮನಸ್ಸಿಗೆ ಹೊಳೆದ ಕವಿತೆ

ಇದು ನಿಮ್ಮ ಓದಿಗಾಗಿ
-ಎಚ್.ಎಸ್. ಮುಕ್ತಾಯಕ್ಕ

ಮುಂಜಾನೆ ಕವಿತೆ
ನನಗೊಂದು ಕೆಂಪು
ಗುಲಾಬಿಯ ಕೊಡುತ್ತ
ಹೇಳಿತು,
“ಇಂದು ನಿನ್ನ ಜನುಮದಿನ
ನಿನಗೇನು ಬೇಕು?”
“ನನಗೇನು ಬೇಕು”
ನಾನು ಮೌನವಾದೆ
ಯೋಚಿಸತೊಡಗಿದೆ
ಎಲ್ಲಿ,ಎಲ್ಲ ಮರೆತು ಹೂಗಳ
ಪರಿಮಳದಲಿ,
ಸ್ವಚ್ಛ ಗಾಳಿಯಲಿ,
ಶರದಿಯ ನೀಲದಲಿ,
ಆಗಸದ ಅನಂತದಲಿ
ಒಂದಾಗುವೆನೊ ಅಲ್ಲಿಗೆ
ಹೋಗಬೇಕು
ಎಲ್ಲಿಯಾದರೂ
ದೂರ ಬಹು ದೂರ
ನಾನೆಂದೂ ನೋಡದ,
ಹೊಸ ತಾಣಕೆ,ಯಾರೂ
ನನ್ನನ್ನು ಗುರುತಿಸದ
ಅಪರಿಚಿತ ಜನರು
ಇರುವತ್ತ ಸಾಗಬೇಕು
ಮತ್ತೆ
ಮರು ಹುಟ್ಟು ಪಡೆಯಲು,
ಹೊಸ ಜನುಮ ಹೊಂದಲು
ಅಷ್ಟೇ ಅಲ್ಲ,
ನನ್ನೊಡನೆ ನಾನು
ಇರುವುದಕ್ಕೆ
ಹೌದು ನನ್ನೊಡನೆ
ನಾನು ಇರುವುದಕ್ಕೆ

–ಎಚ್.ಎಸ್.ಮುಕ್ತಾಯಕ್ಕ, ರಾಯಚೂರು

Leave a Reply

Your email address will not be published. Required fields are marked *