Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ದೇಶದ ಬಹುಜನರ ಘನತೆಯ ಬದುಕಿಗೆ ಭಾರತದ ಸಂವಿಧಾನ ಕಾರಣ - ಸಾಹಿತಿ‌ರಂಜಾನ್ ದರ್ಗಾ - Karnataka Kahale

ದೇಶದ ಬಹುಜನರ ಘನತೆಯ ಬದುಕಿಗೆ ಭಾರತದ ಸಂವಿಧಾನ ಕಾರಣ – ಸಾಹಿತಿ‌ರಂಜಾನ್ ದರ್ಗಾ

ವಿಜಯಪುರ ಫೆ. 4: ಭಾರತದ ಬಹುಸಂಖ್ಯಾತ ದಲಿತರು, ಶೋಷಿತರು, ವಿಶೇಷವಾಗಿ ಮಹಿಳೆಯರು ಇವತ್ತು ಗೌರವಯುತವಾಗಿ ಬದುಕುತ್ತಿದ್ದಾರೆಂದರೆ ಅದಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಸಂವಿಧಾನ ಕಾರಣ ಎಂಬುದನ್ನು ಯಾರೂ ಮರೆಮಾಚಲಾಗದು ಎಂದು ಪ್ರಗತಿಪರ ಚಿಂತಕ, ಸಾಹಿತಿ, ಹಿರಿಯ ಪತ್ರಕರ್ತ ರಂಜಾನ್ ದರ್ಗಾ ಅವರು ಹೇಳಿದರು.
ನಗರದ ತೊರವಿ ರಸ್ತೆಯ ಡಾ. ಅಂಬೇಡ್ಕರ್ ಎಜ್ಯುಕೇಶನಲ್ ಅಸೋಸಿಯೇಶನ್‌ನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಸಚಿವ, ಕ್ರಾಂತಿಕಾರಿ ದಲಿತ ನಾಯಕ ಬಿ. ಬಸವಲಿಂಗಪ್ಪ ಅವರ ೧೦೧ನೆಯ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರ ಬಾಲ್ಯ ಮತ್ತು ವಿದ್ಯಾರ್ಥಿಜೀವನ ಸುಖಮಯವಾಗಿರಲಿಲ್ಲ. ಕಠಿಣ ಪರಿಶ್ರಮದಿಂದ ಜಗತ್ತಿನ ಅತ್ಯಂತ ವಿದ್ಯಾವಂತರಲ್ಲಿ ಒಬ್ಬರಾದರು. ಅವರ ಜನ್ಮದಿನವನ್ನು ವಿಶ್ವ ಜ್ಞಾನದಿನವನ್ನಾಗಿ ಘೋಷಿಸಲಾಗಿದೆ. ಭಾರತದ ಸಂವಿಧಾನ ಬರೆಯುವ ಜವಾಬ್ದಾರಿ ಅವರ ಹೆಗಲಿಗೆ ಬಂತು. ಇಡೀ ಸಂವಿಧಾನಸಭೆಯಲ್ಲಿ ಅವರಷ್ಟು ಪದವಿಗಳು ಯಾರ ಬಳಿಯೂ ಇರಲಿಲ್ಲ. ವಿದ್ಯಾರ್ಥಿಗಳು ಡಾ. ಅಂಬೇಡ್ಕರ್ ಅವರನ್ನು ಆದರ್ಶವನ್ನಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರ ಸಾಧನೆಯ ಹಿಂದೆ ಅವರ ಪತ್ನಿ ರಮಾತಾಯಿಯವರ ತ್ಯಾಗವು ತುಂಬಾ ದೊಡ್ಡದು. ಅವರು ವಿದೇಶದಲ್ಲಿ ಕಲಿಯುತ್ತಿರುವಾಗ ಇಲ್ಲಿ ರಮಾತಾಯಿ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಜೀವನನಿರ್ವಹಣೆ ಮಾಡಿದರು. ಗಂಡನ ಓದಿಗೆ ತೊಂದರೆಯಾಗಬಾರದೆಂದು ಮಗನ ಸಾವಿನ ಸುದ್ದಿಯನ್ನು ಕೂಡ ಅವರಿಗೆ ತಿಳಿಸಲಿಲ್ಲ. ಅಂತಹ ಮಹಾತಾಯಿಯು ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಬೇಕು ಎಂದರು.
ಕಟ್ಟಾ ಅಂಬೇಡ್ಕರ್‌ವಾದಿಯಾಗಿದ್ದ ಬಿ. ಬಸವಲಿಂಗಪ್ಪ ಅವರು, ಕರ್ನಾಟಕದಲ್ಲಿ ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ಜಾರಿಯಲ್ಲಿ ತಂದರು. ತಲೆಯ ಮೇಲೆ ಮಲ ಹೊರುವ ಕೆಟ್ಟ ಸಂಪ್ರದಾಯವನ್ನು ನಿಷೇಧಿಸಿದರು. ಭೂಹೀನರನ್ನು ಭೂಮಿಯ ಒಡೆಯರನ್ನಾಗಿ ಮಾಡಿದರು. ದೇವರಾಜ ಅರಸು ಅವರ ವಿಚಾರಗಳ ಹಿಂದೆ ಬಸವಲಿಂಗಪ್ಪ ಇದ್ದರು ಎನ್ನುವುದನ್ನು ಅಲ್ಲಗಳೆಯಲಾಗದು ಎಂದು ಹೇಳಿದರು.
ಸಾಮಾಜಿಕ ಸಮಾನತೆಗಾಗಿ ನಡೆದ ಎಲ್ಲ ಹೋರಾಟಗಳು ಬಸವಲಿಂಗಪ್ಪ ಅವರಿಂದ ಪ್ರಾರಂಭವಾದವು ಎಂದರೆ ತಪ್ಪಾಗದು. ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಅವರ ಒಂದು ಹೇಳಿಕೆ ಕಾರಣವಾಯಿತು. ಬಂಡಾಯ ಮತ್ತು ದಲಿತ ಸಾಹಿತ್ಯದ ಮೂಲಕ ಪ್ರಖರ ಬರಹಗಾರರು ಹುಟ್ಟಿಕೊಂಡರು ಎಂದು ಹೇಳಿದ ಅವರು ವಿಜಯಪುರದಲ್ಲೂ ಬಸವಲಿಂಗಪ್ಪನವರಿಗೆ ಅನೇಕ ಒಡನಾಡಿಗಳಿದ್ದರು. ಅಂಥವರಲ್ಲಿ ಒಬ್ಬರಾದ ತುಕಾರಾಮ ಚಂಚಲಕರ ಅವರು ಅಂಬೇಡ್ಕರ್ ಮತ್ತು ರಮಾತಾಯಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ದರ್ಗಾ ತಿಳಿಸಿದರು.
ಮುಖ್ಯ ಅತಿಥಿ ಧಾರವಾಡದ ಬಸವ ಮಿಷನ್‌ನ ಮಹಾದೇವ ಹೊರಟ್ಟಿ ಮಾತನಾಡಿ, ಬಿ. ಬಸವಲಿಂಗಪ್ಪ ಅವರು ಒಬ್ಬ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದ ರಾಜಕಾರಣಿಯಾಗಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ಅವರು ಕ್ಷಣವೂ ಇರುತ್ತಿರಲಿಲ್ಲ. ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಬಸವಲಿಂಗಪ್ಪ ಅವರು ಯಾವತ್ತೋ ಮುಖ್ಯಮಂತ್ರಿಯಾಗುತ್ತಿದ್ದರು. ಇಂದಿರಾ ಗಾಂಧಿಯಂಥವರನ್ನೇ ಧಿಕ್ಕರಿಸಿದವರು ಅವರು ಎಂದು ಹೇಳಿದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಧಾರವಾಡದಲ್ಲಿ ಪ್ರಾರಂಭಿಸಿದ್ದ ವಿದ್ಯಾರ್ಥಿನಿಲಯವನ್ನು ವಹಿಸಿಕೊಂಡು ಅದನ್ನು ಮುಂದುವರೆಸಿ ಅಸ್ಪೃಶ್ಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು. ಇವತ್ತಿಗೂ ಕೂಡ ಆ ವಿದ್ಯಾರ್ಥಿನಿಲಯವು ಉಳಿದವರಿಗೆ ಮಾದರಿಯಾಗಿ ನಿಂತಿದೆ ಎಂದು ಹೇಳಿದರು.
ಅಲ್-ಅಮೀನ ಮೆಡಿಕಲ್ ಕಾಲೇಜು ಟ್ರಸ್ಟಿ ಡಾ. ರಿಯಾಜ ಫಾರೂಖಿ, ಡಿ. ದೇವರಾಜ ಅರಸು ವಿಚಾರಜಾಗೃತಿ ಸಂಘದ ಅಧ್ಯಕ್ಷರಾದ ಅರವಿಂದ ಹಿರೊಳ್ಳಿ ವಕೀಲರು, ಸಮಾಜವಾದಿ ನಾಯಕ ಅಪ್ಪಾಸಾಹೇಬ ಯರನಾಳ, ಅಂಬೇಡ್ಕರವಾದಿ ಲೇಖಕ ಅನಿಲ ಹೊಸಮನಿ ಮಾತನಾಡಿ, ದಲಿತರ ಅಭ್ಯುದಯಕ್ಕೆ ಬಿ.ಬಸವಲಿಂಗಪ್ಪ ಅವರ ಕೊಡುಗೆಯನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ತುಕಾರಾಮ ಚಂಚಲಕರ ಅವರು ಮಾತನಾಡಿ ಬಸವಲಿಂಗಪ್ಪ ಅವರ ಜೊತೆಗೂಡಿ ತಾವು ನಡೆಸಿದ ಸಾಮಾಜಿಕ ಹೋರಾಟಗಳ ಮೆಲುಕುಹಾಕಿದರು. ಬಿ. ಬಸವಲಿಂಗಪ್ಪ ಅವರ ಜನ್ಮದಿನವನ್ನು ಸರಕಾರದ ವತಿಯಿಂದ ಆಚರಿಸಬೇಕೆಂದು ಆಗ್ರಹಿಸಿದರು.
ಪಿಯು ಕಾಲೇಜಿನ ಪ್ರಿನ್ಸಿಪಾಲರಾದ ಶ್ರೀಮತಿ ಅಶ್ವಿನಿ ನಾಯಕ ಅವರು ಸ್ವಾಗತಿಸಿ ನಿರೂಪಿಸಿದರು. ಪ್ರೌಢಶಾಲೆಯ ಮುಖ್ಯ ಗುರು ಸಿದ್ದಪ್ಪ ಗುದಗೆನ್ನವರ ವಂದಿಸಿದರು. ಸಂಸ್ಥೆಯ ಅಧ್ಯಕ್ಷ ನಟರಾಜ ಚಂಚಲಕರ, ಉಪಾಧ್ಯಕ್ಷೆ ಶ್ರೀಮತಿ ಸಿಂಧೂ ಚಂಚಲಕರ, ನಿವೃತ್ತ ಪ್ರಾಧ್ಯಾಪಕ ಎಸ್.ಆರ್. ಕಟ್ಟಿ, ಸಿದ್ಧಾರ್ಥ ಹಾಸ್ಟೇಲ್, ಸಂಸ್ಥೆಯ ಪಿಯು ಮತ್ತು ಪದವಿ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.