ಅನುದಿನ ಕವನ-೧೫೮೫, ಹಿರಿಯ ಕವಯಿತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಒಳಗೊಂದು ಪ್ರೀತಿ ಸೆಲೆ ಉಕ್ಕುತ್ತಿರುವವರೆಗೆ ವಯಸ್ಸಾಗುವುದೇ ಇಲ್ಲ

ಒಳಗೊಂದು ಪ್ರೀತಿ ಸೆಲೆ ಉಕ್ಕುತ್ತಿರುವವರೆಗೆ
ವಯಸ್ಸಾಗುವುದೇ ಇಲ್ಲ

ಸುಕ್ಕುಗಟ್ಟಿದ ಕೈ, ಎದ್ದು ಕಾಣುವ ನರ,
ಬಿಳಿ ಕೂದಲು, ಕಾಂತಿ ಕಳಕೊಂಡ ಕಣ್ಣು
ಹೀಗೊಂದು ದೊಡ್ಡ ಪಟ್ಟಿ ತಯಾರಿಸಬೇಡಿ
ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಸಿಕ್ಕಿ ಜಾಗ ಬಿಡಬೇಡಿ
ಸಮುದ್ರದಾಳಕ್ಕಿಳಿವ, ಆಕಾಶಕ್ಕೇರುವ
ಕನಸು ಕಾಣುತ್ತಲೇ ಇದ್ದೇನೆ!

ಒಳಗೊಂದು ಪ್ರೀತಿ ಸೆಲೆ ಉಕ್ಕುತ್ತಿರುವವರೆಗೆ
ವಯಸ್ಸಾಗುವುದೇ ಇಲ್ಲ

ನಾನಿನ್ನೂ ಮುದ್ದು ನಾಯಿಗಳೊಂದಿಗೆ
ನೆಲದಲ್ಲಿ ಹೊರಳುತ್ತ ಆಟವಾಡುತ್ತಿದ್ದೇನೆ
ಹೊಸ ಹಾಡಿಗೆ ನಿಮ್ಮಂತೆ ನರ್ತಿಸುತ್ತಿದ್ದೇನೆ
ಮೊನ್ನೆ ತಾನೇ ಮೊಮ್ಮಗನ ಜೊತೆ
ನಕ್ಷತ್ರ ಲೋಕವನ್ನೆಲ್ಲ ಸುತ್ತಿ ಬಂದಿದ್ದೇನೆ!
ಗೆಳೆಯರೊಂದಿಗೆ ಜೀವ ಹಾರುವಷ್ಟು ನಕ್ಕಿದ್ದೇನೆ

ಒಳಗೊಂದು ಪ್ರೀತಿ ಸೆಲೆ ಉಕ್ಕುತ್ತಿರುವವರೆಗೆ
ವಯಸ್ಸಾಗುವುದೇ ಇಲ್ಲ

ಹೊರಗೆ ಕಾಲಿಡುವ ಮುನ್ನ ಯಾವ ಬಣ್ಣದ ಸೀರೆ,
ಸರ, ಬಳೆಯೆಂದು ಈಗಲೂ ತಲೆಕೆಡಿಸಿಕೊಳ್ಳುತ್ತೇನೆ
ಸಿಗದಿದ್ದರೆ ಊರೆಲ್ಲ ಸುತ್ತಿ ಬರುತ್ತೇನೆ.
ಬಿಸಿಲು, ಮಳೆ, ಗಾಳಿಯೊಂದಿಗೆ ಹೂ ಹಣ್ಣು
ಹೊರುವ ಗಿಡದಂತೆ ತೂಗುತ್ತೇನೆ, ಬೀಗುತ್ತೇನೆ
ನೆಲದ ಅಂತಃಕರಣ ಒಳಗಿಳಿಸಿಕೊಂಡಿದ್ದೇನೆ

ಒಳಗೊಂದು ಪ್ರೀತಿ ಸೆಲೆ ಉಕ್ಕುತ್ತಿರುವವರೆಗೆ
ವಯಸ್ಸಾಗುವುದೇ ಇಲ್ಲ

-ಎಂ ಆರ್ ಕಮಲ, ಬೆಂಗಳೂರು
—–