ಬಳ್ಳಾರಿ, ಮೇ 3: ರಾಜ್ಯ ಸರ್ಕಾರ ಇದೇ ಮೇ ೫ ರಿಂದ ಜಾತಿ ಜನಗಣತಿ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದು, ಛಲವಾದಿ ಸಮುದಾಯದ ಜನರು, ಸಮೀಕ್ಷೆಯಲ್ಲಿ ‘ ‘ಛಲವಾದಿ’ ಎಂದೇ ನಮೂದಿಸಬೇಕು ಎಂದು ಛಲವಾದಿ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವಕುಮಾರ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ನೇತೃತ್ವದ ಏಕಸದಸ್ಯ ಸಮಿತಿಯು ಇದೇ ಮೇ ೫ ರಿಂದ ರಾಜ್ಯಾದ್ಯಂತ ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ಜನಗಣತಿ ಕಾರ್ಯ ನಡೆಸಲಿದೆ. ಸಮೀಕ್ಷೆ ಮಾಡುವ ಅಧಿಕಾರಿಗಳು ಖುದ್ದು ಮನೆ ಮನೆಗೆ ಭೇಟಿ ನೀಡಿ ಜಾತಿವಾರು ಜನಗಣತಿ ಮಾಹಿತಿ ಸಂಗ್ರಹಿಸಿ ಅಂಕಿ ಸಂಖ್ಯೆಗಳನ್ನು ದಾಖಲಿಸಲಿದ್ದಾರೆ. ಜಾತಿ ಕಾಲಂನಲ್ಲಿ ಪರಿಶಿಷ್ಟ ಜಾತಿಯೆಂದು, ಉಪಜಾತಿ ಕಾಲಂನಲ್ಲಿ ತಮ್ಮ ಮೂಲ ಜಾತಿಯಾದ ‘ಛಲವಾದಿ, ಬಲಗೈ, ಹೊಲೆಯ’ ಎಂದು ನಮೂದಿಸಬೇಕು. ಮುಖ್ಯವಾಗಿ ಛಲವಾದಿ ಎಂದು ನಮೂದಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು
ಸಮುದಾಯದಲ್ಲಿ ಮನವಿ ಮಾಡಿಕೊಂಡರು.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಬೇಕೆಂಬುದು ದಲಿತ ಪರ ಸಂಘಟನೆಗಳ ಕಳೆದ ಮೂರು ದಶಕಗಳ ಹೋರಾಟವಾಗಿದೆ. ಸಾಕಷ್ಟು ಒತ್ತಡ ಹೇರಿದ ಬಳಿಕ ಮಣಿದಿರುವ ರಾಜ್ಯ ಸರ್ಕಾರ ಒಳಮೀಸಲಾತಿ ನೀಡಲು ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ಜನಸಂಖ್ಯೆಯನ್ನು ಗಣತಿ ಮಾಡಲು ಮುಂದಾಗಿದೆ. ಗಣತಿಯಲ್ಲಿನ ಜನಸಂಖ್ಯೆಯನ್ನು ಆಧರಿಸಿ ಒಳಮೀಸಲಾತಿ ನೀಡುವ ಸಾಧ್ಯತೆಯಿದೆ. ಆದ್ದರಿಂದ ಛಲವಾದಿ ಸಮುದಾಯದ ಜನರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೇ ಸಮೀಕ್ಷೆ ವೇಳೆ ಛಲವಾದಿ ಎಂದೇ ನಮೂದಿಸಬೇಕು ಎಂದು ಅವರು ಹೇಳಿದರು.
ಜಾತಿ ಸಮೀಕ್ಷೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಾಸಭಾ, ದಲಿತಪರ ಸಂಘಟನೆಗಳಿಂದಲೂ ನಗರ, ಗ್ರಾಮ, ಹೋಬಳಿ ಪ್ರದೇಶಗಳಿಗೆ ತೆರಳಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜತೆಗೆ ಯಾವುದೇ ಗೊಂದಲಗಳು ಇದ್ದಲ್ಲಿ ಮಹಾಸಭಾದ ಪದಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಕಪ್ಪಗಲ್ ಓಂಕಾರಪ್ಪ, ಜೆ.ಎಸ್.ಶ್ರೀನಿವಾಸ, ನಾಗಲಕೆರೆ ಗೋವಿಂದರಾಜು, ದೀಕ್ಷಾ ಶಂಕರ್, ನಾಗರಾಜ್ ತಲಮಾಮಿಡಿ, ಶಂಕರ್ ನಂದಿಹಾಳ್, ಸಿ.ಶ್ರೀನಿವಾಸ್, ಲೋಕೇಶ್, ಕೊಳಗಲ್ಲು ಮಾನಯ್ಯ, ಗೋನಾಳ್ ಮಲ್ಲಿಕಾರ್ಜುನ ಸೇರಿ ಹಲವರು ಇದ್ದರು.