ಲೋಕದ ಸೀಮೆ ದಾಟಿದವ
ಈ ರಾತ್ರಿ ವಿಚಿತ್ರವಾಗಿದೆ
ಹಾಲುಬೆಳಕಲ್ಲೂ ಹಾಲಾಹಲ ಕುದಿಯುತ್ತಿದೆ
ಪ್ರಶಾಂತ ನಟ್ಟಿರುಳು ಬೇಗೆಗಳ ಚಿಮ್ಮಿಸುತ್ತಿದೆ
ಇಲ್ಲೊಂದು ಹಸುಳೆಯ ಆಕ್ರಂದನ ತುಂಬಿಕೊಳ್ಳಲು
ಅಲ್ಲೊಂದು ಜೀವದ ತಹತಹ ಖಾಲಿಯಾಗಲು
ಇಗೋ
ಬೆಳಕು ಬೆಳಕಿನಾಟ ತಣ್ಣಗಿದೆ
ಇದ್ದೂ ಇಲ್ಲದಂತೆ
ಅಗೋ ಕತ್ತಲು ಕತ್ತಲಿನಾಟ ಕುಣಿಯುತ್ತಿದೆ ಭ್ರಮಾಧೀನಗೊಳಿಸುವಂತೆ
ಒಂದಿಡೀ ಶತಮಾನ ಸಾಲದು
ರಕ್ತ ಜಿನುಗಿದ ದಾರಿಯಲಿ ಬಿದ್ದ ಮೂಳೆಗಳ ಆಯಲು
ಅವನೊಬ್ಬ ಬೋಧಿಮರದಡಿ ಕುಳಿತು ಮುಲಾಮು ಹುಡುಕಿದ
ಬೆರಳ ಹಾರ ಹೊತ್ತವನ ಕಣ್ಣಲ್ಲೇ ಕರಗಿಸಿದ
ಯಜ್ಞ ಕುಂಡ ಹೊತ್ತ ಹೃದಯಗಳಿಗೆ
ತಾಳ್ಮೆಯ ಪಿಸುಮಾತು ಕಲಿಸಿದ
ಮೌನದ ಬೀಜವ ಊರಿದ ಎದೆಗಳಲ್ಲಿ ಮೌನವಾಗಿ
ಯಾ ಶೋಧದ ಶೋದವೂ ಫಲಿಸಲಿಲ್ಲ
ರಾ ಹೂವಿನ ಘಮವೂ ತಡೆಯಲಿಲ್ಲ ಅವನ,,
ಸಿದ್ಧಾರ್ಥ
ಈಗ
ಸಿದ್ದ ಅರ್ಥನಾದ
ಶುದ್ಧ ಅರ್ಥನಾದ
ಜಗತ್ತು ಧರ್ಮದ ಆಯುಧ ಹಿಡಿದು ಹೋರಾಡುವಾಗ
ತತಾಗಥ ಲೋಕದ ಸೀಮೆ ದಾಟಿ
ಹೃದಯ ಬೆಸೆಯುತ್ತ ಸುಮ್ಮಾನ ನಡೆದಿದ್ದ
ಬೆಳಕಿನೂರಿಗೆ
ಬದುಕಿನೂರಿಗೆ
ಮನಸಿನೂರಿಗೆ.
-ಶಿಲ್ಪಾ ಮ್ಯಾಗೇರಿ, ಗದಗ