ದೊಡ್ಡವರ ಸಹವಾಸ
ನಾವು ಹೂವು ಹಣ್ಣು
ಬೆಳೆದು ಕೊಡಬೇಕು
ನಾವು ಜೀವ ಉಳಿಸುವ
ಔಷಧಿ ಕಳಿಸಿ ಕೊಡಬೇಕು
ಪ್ರತಿಯಾಗಿ ಅವರಿಂದ
ಜೀವ ತೆಗೆಯುವ
ಅಸ್ತ್ರ ಶಸ್ತ್ರಗಳನ್ನು ನಾವು
ಖರೀದಿಸಬೇಕು
ಆದರೆ ಅವರು ಹೇಳಿದರೆ
ಮಾತ್ರ ಪ್ರಯೋಗಿಸಬೇಕು
ಅವರು ಬಯಸಿದಾಗ ಯುದ್ಧ
ಮಾಡಬೇಕು, ಅವರು ನಿಲ್ಲಿಸಿ
ಎಂದರೆ ನಿಲ್ಲಿಸಬೇಕು!
ನಾವು ಬಾಣ ಮಾತ್ರವೇ…
ಗುರಿ ಅವರದ್ದು!!
“ಬಡವಾ ನೀ ಮಡಗಿದಂಗಿರು”
ಎಂದು ಅಚ್ಚ ಕನ್ನಡದ ಗಾದೆಯಿದೆ
ದೊಡ್ಡವರ ಸಹವಾಸ ಸದಾ ಉಪವಾಸ!
ಜನಪದ ವಿವೇಕ ತನ್ನತನವ
ಮೆರೆಯುವುದರಲ್ಲಿದೆ
ಕೂಡಿ ಬಾಳಿ
ಬದುಕುವುದರಲ್ಲಿದೆ….
-ಸವಿತಾ ನಾಗಭೂಷಣ, ಶಿವಮೊಗ್ಗ