ಕೊಪ್ಪಳ, ಮೇ 13 : ಸಮಾಜದಲ್ಲಿ ಎಲ್ಲರೂ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಪ್ರತಿಯೊಬ್ಬರೂ ಬುದ್ಧನ ಮಾರ್ಗವನ್ನು ಅನುಸರಿಸಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಹೇಳಿದರು.
ಕೊಪ್ಪಳ ತಾಲ್ಲೂಕಿನ ಭಾಗ್ಯನಗರದ ಜ್ಞಾನಬಂಧು ಸಿ.ಬಿ.ಎಸ್.ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಕೊಪ್ಪಳ ವಿಶ್ವ ವಿದ್ಯಾಲಯ ಸೋಮವಾರ ಬುಧ್ಧ ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ ‘ಬೆಳದಿಂಗಳದಲ್ಲಿ ಕಾವ್ಯ ಪೂರ್ಣಿಮಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೌತಮ ಬುದ್ಧ ಮಹಾ ಬೆಳಕು, ಚೈತನ್ಯದ ಚಿಲುಮೆ ಎಂದರೆ ತಪ್ಪಾಗಲಾರದು. ಎಲ್ಲರನ್ನು ಪ್ರೀತಿಸಬೇಕು ಮತ್ತು ಗೌರವಿಸುವುದು ಆದ್ಯ ಕರ್ತವ್ಯವಾಗಿದೆ. ಶಾಂತಿ ಕದಡುವ ಸಂದರ್ಭದಲ್ಲಿ ಬುದ್ಧನ ಅಹಿಂಸ ಮಾರ್ಗ ಬಹಳ ಮಹತ್ವದ್ದಾಗಿದೆ. ಚೈನಾ, ಜಪಾನಲ್ಲಿರುವ ಬುದ್ಧನ ಬೃಹತ್ ಪ್ರತಿಮೆಗಳನ್ನು ನೋಡಿದ್ದೇನೆ. ಅವರು ಬುದ್ಧನನ್ನು ಅನುಸರಿಸುತ್ತಾರೆ. ಆದರೆ ಬುದ್ಧನ ನಾಡು ಭಾರತದಲ್ಲಿ ನಾವೇ ಮರೆತುಹೋಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳ ಮೂಲಕ ಬುದ್ಧನನ್ನು ನೆನೆಯೋಣ ಎಂದರು.
ಹಿರಿಯ ಸಾಹಿತಿ ಎಚ್ .ಎಸ್ ಪಾಟೀಲ್ ಮಾತನಾಡಿ, ಬುದ್ಧಪೂರ್ಣಿಮವನ್ನು ಕೊಪ್ಪಳ ವಿವಿಯಿಂದ ಆಚರಿಸುತ್ತಿರುವುದು ಸಂತಸದ ವಿಷಯ, ಅಶೋಕ ಶಾಸನ ಸಿಗುವುದೇ ಕಷ್ಟ ಎನ್ನುವ ಸಂದರ್ಭದಲ್ಲಿ ಕೊಪ್ಪಳದಲ್ಲಿ ಆಶೋಕ ಶಾಸನ ವಿಶೇಷವಾಗಿದೆ, ಚಪಡ ಎನ್ನುವ ಶಿಲ್ಪಿಯನ್ನು ಆಶೋಕನೂ ತನ್ನ ಸಾಮ್ರಾಜ್ಯದಿಂದ ಬಂದು ಕೊಪ್ಪಳಕ್ಕೆ ಬಂದು ಎರಡು ಶಾಸನಗಳನ್ನು ಕೆತ್ತಿದ್ದಾನೆ. 400 ವರ್ಷಗಳ ವರೆಗೆ ತನ್ನ ಧರ್ಮವನ್ನು ವಿಸ್ತರಿಸುತ್ತಾ ಬಂದಿರುವಂತಹ ಆಕಾಶ ಮತ್ತು ಭೂಮಿ, ದೇವತೆಗಳು ಮತ್ತ ಜನರು ಇವತ್ತು ಸಹ ಜೀವನ ನಡೆಸುವಂತಹ ಸಂದರ್ಭ ಬುದ್ದನಿಂದ ಒದಗಿದೆ. ನಾವು ಭಗವಂತನ, ದೇವರನ್ನು ಕಾಣ ಬೇಕಾದರೆ ಎಲ್ಲಿಗೂ ಹೋಗಬೇಕಾಗಿಲ್ಲ, ಹಿರಿಯರನ್ನು, ಸ್ತ್ರೀಯರನ್ನು, ವೃದ್ಧರನ್ನ, ಸಾಮಾನ್ಯ ಜನರನ್ನ ಗುರುಗಳನ್ನ ಗೌರವಿಸಿದನ್ನು ಕಲಿತರೆ ಬುದ್ಧನ ಮಾರ್ಗದಲ್ಲಿ ಹೋಗುತ್ತೇವೆ ಎಂದು ಕೊಪ್ಪಳದ ಎರಡು ಶಾಸನದಲ್ಲಿ ಆಶೋಕ ಬರೆಸಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ನಂತರ ಕವಿಗಳು ಕವಿತೆ ವಾಚನ ಮಾಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಎಮ್ ಮದರಿ , ಜ್ಞಾನಬಂಧು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ದಾನಪ್ಪ ಕವಲೂರು, ಶಕ್ತಿ ಶಾರದೆಯ ಮೇಳ ಸಂಚಾಲಕ ಡಿ.ಎಮ್ ಬಡಿಗೇರ, ವಿಶ್ವವಿದ್ಯಾಲಯದ ಕುಲಸಚಿವ ಕೆ.ವಿ ಪ್ರಸಾದ ಹಾಗೂ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಇದ್ದರು. ವಿಶ್ವವಿದ್ಯಾಲಯ ಹಾಗೂ ಜ್ಞಾನ ಬಂಧು ಶಾಲೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು,