ತಾಯಿ
ಅನುದಿನವೂ ನೀಡುವಳು ಅನ್ನ
ಪ್ರತಿಫಲಾಪೇಕ್ಷೆಯಿರದೆ,
ತನ್ನೊಡಲ ಕುಡಿ ಬದುಕಿ ಬಾಳಲೆಂದು
ಜಗಕೆ ಬೆಳಕ ತರಲಿ ಎಂದು॥
ತನ್ನ ತಾ ಮರೆತು ಪೊರೆವಳು
ಒಡಲ,ಒಲವ ಕುಡಿಗಳ,
ಸುಲಿಗೆ ಮಾಡುವವರಿಗೂ
ಸಲಿಗೆ ನೀಡುತ ಸಲುಹುವಳು
ಮಮತೆಯಿಂದ॥
ಜೀವಪ್ರೀತಿಯ ಪಾಠ
ಸಾರ ಹೊತ್ತ ಅವಳು
ಭಾರ ಹೊತ್ತಿಹಳು
ಸುಪ್ತ ಭಾವದಿ,ಹಿತವ ಕಾಯುತ॥
ಕೆಡುಕು ಒಳಿತುಗಳೆಲ್ಲ ನುಂಗಿ
ಮಲಿನತೆಯನೂ ತೊಳೆದು
ಹಸನು ಮಾಡುತ
ಜಸವ ಬಯಸುವಳು,ಅವಳು॥
ತುತ್ತು ನೀಡುವ ಅವಳು
ಹೊತ್ತು ಸಾಕುವಳು
ತಾಳ್ಮೆಯಿಂದಲೇ ಹರಸುತ
ನಾಕುದಿನದ ಸಂತೆಯ ಜಗದ
ಜನರನು॥
ದಿನಕರನ ಶಕ್ತಿ ಹೀರಿ
ಚಂದನವಾಗಿಸುವ ಭಾವದಿ
ನಂದನವನದ ಕನಸಿನಲಿ
ಬಂಧಿಸಿಹಳು
ಮಡಿಲಜೀವಿಗಳ ಅವಳು ॥
ಸ್ವಾರ್ಥ ಕೃತ್ಯಗಳ ಸಹಿಸಿ
ಬದುಕು ಸವೆಸುತ ಸಾಗಿಹಳು
ನೋವಿನಲೂ
ಹಿತವ ಬಯಸುತ
ಬೆಳಕು ಬೆಳಗುವ ದೀಪದಂತೆ॥
ಗಾಳಿ ನೀರು ಕೆಡಿಸಿದರೇನು
ನೆಲವ ಬಗೆದರೂ ಏನು?
ಸಹಿಸಿ ಮೆರೆದಿಹಳು ತಾಳ್ಮೆಯಿಂದಲೇ!
ದಿವ್ಯ ದೃಷ್ಟಿಯ ತಾಯಿ ಅವಳು
ನಮಗೂ ನಿಮಗೂ ಜಗದ ಜೀವಿಗಳ
ಭೂತಾಯಿ ಅವಳು॥
-ಜ್ಯೋತಿಪ್ರಿಯ, ಬಳ್ಳಾರಿ
—–