ಪತ್ರಕರ್ತರಿಗೆ ಆತ್ಮಸ್ಥೈರ್ಯ, ಸಾಮಾಜಿಕ ಜವಾಬ್ದಾರಿ ಅವಶ್ಯಕ -ಹಿರಿಯ ಪತ್ರಕರ್ತ ಸಿ.ಮಂಜುನಾಥ

ಕೊಪ್ಪಳ: ಪ್ರತಿಯೊಬ್ಬ ಪತ್ರಕರ್ತನಿಗೆ ಆತ್ಮಸ್ಥೈರ್ಯ , ಬರವಣಿಗೆ ಕೌಶಲ್ಯ ಮತ್ತು ಸಾಮಾಜಿಕ ಜವಾಬ್ದಾರಿ ಅವಶ್ಯಕವಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ, ಉಪನ್ಯಾಸಕ ಬಳ್ಳಾರಿಯ ಸಿ.ಮಂಜುನಾಥ ಅವರು  ಹೇಳಿದರು.
ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಶನಿವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವರದಿಗಾರಿಕೆಯ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪತ್ರಿಕಾ ವೃತ್ತಿ ಹೂವಿನ ಹಾಸಿಗೆ ಅಲ್ಲ, ವೃತ್ತಿಯಲ್ಲಿ ಸಾಕಷ್ಟು ಸವಾಲುಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಎದುರಿಸಿ ವರದಿಗಾರನು ವೃತ್ತಿಯಲ್ಲಿ ಯಶಸ್ಸು ಕಾಣಬೇಕಾಗುತ್ತದೆ ಎಂದು ತಿಳಿಸಿದರು.
ವರದಿಗಾರನು ವರದಿಗೆ ಹೋಗುವ ಮುನ್ನ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ, ದೈಹಿಕವಾಗಿ ಸಿದ್ಧರಿರಬೇಕು ಎಂದ ಅವರು ತಮ್ಮ‌ ಮೂರು ದಶಕಗಳ ಪ್ರಮುಖ  ಅನುಭವಗಳನ್ನು ಹಂಚಿಕೊಂಡರು.                       ಪ್ರಸ್ತುತ ದಿನಗಳಲ್ಲಿ ಪತ್ರಕರ್ತರಿಗೆ ಸಾಮಾಜಿಕ ಜಾಲತಾಣಗಳು ಸವಾಲಾಗಿವೆ ಎಂದು ಅಭಿಪ್ರಾಯ ಪಟ್ಟರು.
ಪತ್ರಕರ್ತರ ವರದಿಗಳು ಜನಪರ, ಪ್ರಾಮಾಣಿಕತೆಯಿಂದ, ನಿಷ್ಠುರವಾಗಿ ಕೂಡಿರಬೇಕು, ಪತ್ರಕರ್ತರು ಪತ್ರಿಕೋದ್ಯಮಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸಬೇಕು ಜೊತೆಗೆ ಬರವಣಿಗೆ ಹಾಗೂ ಮಾತುಗಾರಿಕೆಯ ಕೌಶಲ್ಯವನ್ನು  ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ವಿ.ಪ್ರಸಾದ ಅವರು ಮಾತನಾಡಿ , ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿದ ನಂತರ ಸರಿಯಾಗಿ ಗ್ರಹಿಸಿಕೊಳ್ಳುವ ಶಕ್ತಿಯನ್ನು ಹೊಂದುವ ಮೂಲಕ ಅದನ್ನು ವೇದಿಕೆಯ ಮೇಲೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಕೌಶಲ್ಯವನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.


ಸನ್ಮಾನ: ಇದೇ ಸಂದರ್ಭದಲ್ಲಿ ಸಿ.‌ಮಂಜುನಾಥ್ ಅವರನ್ನು ವಿವಿ ಕುಲ‌ಸಚಿವ ಡಾ. ಕೆ ವಿ ಪ್ರಸಾದ್ ಮತ್ತು ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ತಿಮ್ಮಾರೆಡ್ಡಿ ಮೇಟಿ ಅವರು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಂತೋಷಕುಮಾರ್ ಹೆಚ್ ಕೆ, ರಂಗನಾಥ್, ಶ್ರೀಕಾಂತ, ಡಾ. ಪ್ರವೀಣ ಪೋಲಿಸ ಪಾಟೀಲ ಹಾಗೂ ವಿವಿಧ ವಿಭಾಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಪದ್ಮಜಾ ನಾಗಲಾಪುರಮಠ ನಿರೂಪಿಸಿದರು.