ಬಳ್ಳಾರಿ: ಎನ್ ಎಸ್ ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಭ್ರಾತೃತ್ವ, ರಾಷ್ಟ್ರಪ್ರೇಮ, ಸೇವಾ ಮನೋಭಾವನೆಗಳನ್ನು ಕಲಿಸಿದ್ದು, ಭವಿಷ್ಯದಲ್ಲಿ ಈ ಎಲ್ಲಾ ಉತ್ತಮಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಎಂದು ಎಸ್ ಎಸ್ ಎ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸಿ. ಎಚ್. ಸೋಮನಾಥ್ ಅವರು ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್(ಎಸ್ ಎಸ್ ಎ) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕಗಳು ಸಮೀಪದ ಕಪ್ಪಗಲ್ಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದ
ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್ಎಸ್ಎಸ್ ನ ಏಳು ದಿನಗಳ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮುದಾಯದ ಜೊತೆಗೆ ಬೆರೆಯುವುದನ್ನು ಕಲಿತಿದ್ದೀರಿ. ಶಿಬಿರವು ನಿಮಗೆ ಉತ್ತಮ ಜೀವನ ನಡೆಸಲು ಅನೇಕ ಪಾಠಗಳನ್ನು ಕಲಿಸಿದೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಗಳ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ ಎಂದರು.
ಶಿಬಿರದ ಕಲಿಕೆ ಸತ್ಪ್ರಜೆಗಳಾಗಿ ಭವ್ಯ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಆಶಿಸಿದರು.
ಮುಖ್ಯ ಅತಿಥಿ ವಾಣಿಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ಗುರುಬಸಪ್ಪ ಅವರು ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯ ನನಗಾಗಿ ಅಲ್ಲ ನಿನಗಾಗಿ ಎನ್ನುವುದು. ಶಿಬಿರಾರ್ಥಿಗಳು ನಿಸ್ವಾರ್ಥ ಮನೋಭಾವನೆಯಿಂದ ಸಮಾಜ ಸೇವೆಯಲ್ಲಿ ತೊಡಗುವುದನ್ನು ಸೂಚಿಸುತ್ತದೆ. ತನಗಾಗಿ ಬದುಕದೆ ಇತರ ಇತರರ ಏಳಿಗೆಗಾಗಿ ಬದುಕುವುದನ್ನು ಎನ್ಎಸ್ಎಸ್ ಕಲಿಸಿಕೊಡುತ್ತದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಶೋಭರಾಣಿ, ಎನ್ಎಸ್ಎಸ್ ನ ಮುಖ್ಯ ಉದ್ದೇಶ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶ್ರಮದಾನ, ಪ್ರಾಚ್ಯ ವಸ್ತುಗಳ ಸಂರಕ್ಷಣೆ, ರಾಷ್ಟ್ರೀಯ ಜಾಗೃತಿ ಮೂಡಿಸುವಿಕೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ, ತನ್ಮೂಲಕ ಪ್ರತಿಯೊಬ್ಬ ಶಿಬಿರಾರ್ಥಿಯು ತನ್ನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಇದು ಒಂದು ಉತ್ತಮವಾದ ವೇದಿಕೆಯಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ
ಎನ್ಎಸ್ಎಸ್ ಘಟಕದ ಸಂಚಾಲಕ ಪ್ರೊ. ಬಿ ರಾಮಸ್ವಾಮಿ ಅವರು, ವಿದ್ಯಾರ್ಥಿಗಳು ಶಿಬಿರದಲ್ಲಿ ಏಳು ದಿನಗಳ ಕಾಲ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡು, ಶ್ರಮದಾನ, ಸಾಂಸ್ಕೃತಿಕ ಚಟುವಟಿಕೆಗಳು, ಅಡುಗೆ ತಯಾರಿ, ಯೋಗದಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಸಮಾಜದಲ್ಲಿ ಸಹಭಾಗಿತ್ವದೊಂದಿಗೆ ಭಾಗವಹಿಸುವುದನ್ನು ಕಲಿಸುತ್ತದೆ. ಉತ್ತಮ ಸೇವಾ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಸಂಚಾಲಕರುಗಳಾದ ಡಾ. ಚನ್ನಬಸವಯ್ಯ, ಪ್ರೊ. ಪ್ರವೀಣ್ ಕುಮಾರ್, ಪ್ರೊ. ನಾಜಿಯಾ ಖಾಜಿ , ಪ್ರೊ. ಬಸಪ್ಪ ಕೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ ಪಂಪನಗೌಡ, ಅರ್ಥಶಾಸ್ತ್ರ ಉಪನ್ಯಾಸಕ ವೀರೇಶಯ್ಯ ಸ್ವಾಮಿ, ರಾಜ್ಯಶಾಸ್ತ್ರ ಉಪನ್ಯಾಸಕ ರುದ್ರಮುನಿ ಟಿ ಹಾಗೂ ಊರಿನ ಗ್ರಾಮಸ್ಥರು, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.
ಶಿಬಿರದ ಉತ್ತಮ ಶಿಬಿರಾರ್ಥಿಗಳಿಗೆ ಬಹುಮಾನ ಘೋಷಿಸಲಾಯಿತು.
ಶಿಬಿರಾರ್ಥಿ ಶ್ರೀಧರ್ ನಿರೂಪಿಸಿದನು. ಬಿಂದು ಪ್ರಾರ್ಥಿಸಿದರು. ಕಾವೇರಿ ಸ್ವಾಗತಿಸಿದರು. ಗಣೇಶ್ ವಂದಿಸಿದರು.