Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೬೧೧, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಬೆಳಕು - Karnataka Kahale

ಅನುದಿನ ಕವನ-೧೬೧೧, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಬೆಳಕು

“ಇದು ಬುವಿಯ ಬದುಕಿನ ನಿತ್ಯ ಸತ್ಯ-ಸತ್ವಗಳ ಅನಾವರಣದ ಕವಿತೆ. ಇಳೆಯ ಬೆಳಕಿನ ಚಿರಂತನ ತತ್ವ-ಮಹತ್ವಗಳ ರಿಂಗಣಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವ-ಜೀವನದ ಅರಿವಿದೆ. ಅರ್ಥೈಸಿದಷ್ಟೂ ಬದುಕು-ಬೆಳಕಿನ ಸಾರಗಳ ಹರಿವಿದೆ. ತನ್ನೊಳಗೆ ಬೆಳಕಿದ್ದವನಷ್ಟೇ ಜಗಕೆ ಬೆಳಕಾಗಬಲ್ಲ. ತನ್ನ ತಾ ಸುಟ್ಟುಕೊಂಡು ಜ್ಯೋತಿಯಾದವನಷ್ಟೇ ಜಗತ್ತನ್ನು ಬೆಳಗಬಲ್ಲ. ಏನಂತೀರಾ..?” –

-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಬೆಳಕು.!

ಮನೆ-ಮಡದಿ ಬಿಟ್ಟವರೆಲ್ಲ
ಗೌತಮಬುದ್ದನಾಗಲಿಲ್ಲ.!
ಪಿತೃವಾಕ್ಯ ಪಾಲಿಸಿದವರೆಲ್ಲ
ಶ್ರೀರಾಮಚಂದ್ರನಾಗಲಿಲ್ಲ.!

ಕಾವಿಬಟ್ಟೆ ಉಟ್ಟವರೆಲ್ಲ
ಸ್ವಾಮಿ ವಿವೇಕರಾಗಲಿಲ್ಲ.!
ಖಾದಿಟೋಪಿ ತೊಟ್ಟವರೆಲ್ಲ
ಮಹಾತ್ಮಾಗಾಂಧಿಯಾಗಲಿಲ್ಲ.!

ಆತ್ಮ ಮಹಾತ್ಮನಾಗಲು..
ಅಂತಃಸತ್ವವಿರಬೇಕು.!
ನರ ನಾರಾಯಣನಾಗಲು
ದೃಢತತ್ವ ಬೇಕೇಬೇಕು.!

ಆತ್ಮಶೋಧನೆ ಬೇಕು.
ಸತತ ಸಾಧನೆ ಬೇಕು.!
ಅವಡುಗಚ್ಚಿ ಸಕಲ
ವೇದನೆ ಸಹಿಸಬೇಕು.!

ಛಲಬಿಡದ ನಿರಂತರ
ಶ್ರಮ-ತಪನೆ ಬೇಕು.!
ತೇಯ್ದಷ್ಟೂ ಘಮಿಸುವ
ಶ್ರೀಗಂಧವಾಗಬೇಕು.!

ಕರಗಿ ಬೆಳಕಾಗುವ
ಕರ್ಪೂರವಾಗಬೇಕು.!
ಜೀವ ದೈವವಾಗಲು
ಉರಿದು ಪ್ರಜ್ವಲಿಸಬೇಕು.!


-ಎ.ಎನ್.ರಮೇಶ್. ಗುಬ್ಬಿ.
—–