ಅನುದಿನ ಕವನ-೧೬೧೭, ಕವಯತ್ರಿ: ಡಾ. ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಕವಿಯನ್ನು ಹುಡುಕುತ್ತಿರುವೆ

ಕವಿಯನ್ನು ಹುಡುಕುತ್ತಿರುವೆ

ಹಾರ ತುರಾಯಿ ಪೇಟ ಕಿರೀಟ
ಸನ್ಮಾನಗಳ ನಡುವೆ
ಒಂದರ ಮೇಲೊಂದು ಪೇರಿಸಿಟ್ಟ
ಪುಸ್ತಕ ರಾಶಿಗಳ ನಡುವೆ
ವೇದಿಕೆ ಮೈಕು ಬಣ್ಣದ ಪೋಷಾಕು
ನಗು ಹರಟೆ
ಕೊನೆಮೊದಲಿಲ್ಲದ ಮಾತು
ವಾದ ಚರ್ಚೆ ತರ್ಕ ಸಿದ್ಧಾಂತ
ವಿಮರ್ಶೆ ವಿಶ್ಲೇಷಣೆ ವಾಗ್ವಾದಗಳಲ್ಲಿ
ಅವಾ ಕಾಣಲಿಲ್ಲ.

ದಿಕ್ಕುದೆಸೆ ಕಾಣದೆ ಓಡುವ
ಜನಜಂಗುಳಿಯಲ್ಲಿ
ಮಾರಾಟಕ್ಕಿಟ್ಟ
ಆಕರ್ಷಕ ಮುಖವಾಡಗಳಲ್ಲಿ
ಎಲ್ಲ ಗೆಲ್ಲುವ ಚಟ ಹೊತ್ತು
ಸ್ಪರ್ಧೆಯಲ್ಲಿರುವವರ ಸಾಲಿನಲ್ಲಿ
ಹರಕೆ ಮುಡಿಪು ಉತ್ಸವದಲ್ಲಿ
ಅವಾ ಕಾಣಲಿಲ್ಲ.

ನಿರಾಶಳಾಗಿ ಸಂಜೆಗೆಂಪಿನ ತಂಪು
ಬಿಸಿಲಿಗೆ ಮೈಯೊಡ್ಡಿ ಕೂತು
ಬೇಸರಕೋ ತಳಮಳಕೋ
ಕಣ್ಣು ತುಳುಕುವಾಗ
ಅದೆಲ್ಲಿಂದಲೋ
ಅಚಾನಕ್ಕಾಗಿ ಆತ ಪ್ರತ್ಯಕ್ಷನಾದ !

ಕಾಂಪೌಂಡಿನ ಮೂಲೆಯಲಿ
ನಿಂತಿದ್ದ ಮಳೆ ನೀರಿನಲ್ಲಿ ಸಿಲುಕಿದ್ದ
ಸಣ್ಣ ಇರುವೆಯೊಂದನ್ನು
ತೋರು ಬೆರಳಿನ ತುದಿಯಿಂದೆತ್ತಿ
ಬಲು ಮೃದುವಾಗಿ
ನೆಲದ ಮೇಲಿರಿಸಿ ಮುನ್ನಡೆಸಿದ
ಮನೆಯೆದುರಿನ ಮರದೊಳಗಿನ
ಹಸಿರು ಚಿಗುರಿನ ನಡುವೆ
ಕಾಣದ ಪುಟ್ಟ ಹಕ್ಕಿಯ ಉಲಿತಕ್ಕೆ
ಮೈಮರೆತು ಕಿವಿಯಾದ.
ಮೋಡಗಳೊಂದಿಗೆ ಓಡುವ
ಬೆಳ್ಳಕ್ಕಿಗಳ ಕಂಡು ಹರ್ಷಗೊಂಡ
ತುಂತುರು ಮಳೆಹನಿಗೆ ಮೈಯೊಡ್ಡಿ
ತನ್ಮಯನಾದ
ಥಂಡಿಗಾಳಿಗೆ ಆಹ್ಲಾದಗೊಂಡ
ಬಿಸಿಲ ಮಳೆಗೆ ಹೊಳೆದ
ಕಾಮನಬಿಲ್ಲಿನ ಅಷ್ಟೂ ಬಣ್ಣ
ಅವನ ಕಣ್ಣುಗಳಲ್ಲಿ ತುಂಬಿಸಿಕೊಂಡ
ಮಳೆಗೆ ತೊಯ್ದು ನಡುಗುತ್ತಿದ್ದ
ಬೀದಿನಾಯಿಯ ಮರಿಗೆ ಮಡಿಲಾದ.

ಸನಿಹದಲ್ಲೇ ಕೂತು ಹನಿಗೂಡಿದ
ಕಂಗಳಲ್ಲೂ ಬೆರಗಾದ
ನನ್ನ ಬಲಗೈಯನ್ನೊಮ್ಮೆ
ತನ್ನ ಎಡಗೈಯಿಂದೊತ್ತಿ
ಮೃದುವಾಗಿ ನಕ್ಕು
ನೆಮ್ಮದಿಯ ಉಸಿರೆಳೆದುಕೊಂಡು
ಕೊಂಚಕೊಂಚವೇ ಮಬ್ಬಾಗಿ
ಮರೆಯಾದ
ಬೆಚ್ಚಗಿನ ಸ್ಪರ್ಶದಲ್ಲಿ ಕವಿತೆಯೊಂದ
ಸೋಕಿಸಿ ಹೋದ.

ನಾನೀಗ ಕವಿಯನ್ನು ಹುಡುಕುತ್ತಿಲ್ಲ.


-ಡಾ. ಲಾವಣ್ಯ ಪ್ರಭ, ಮೈಸೂರು
—–

Leave a Reply

Your email address will not be published. Required fields are marked *