ವಿದ್ಯಾರ್ಥಿಗಳು ಪಠ್ಯದ ಜತೆ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಅಧ್ಯಾಪಕರ ಪ್ರೇರಣೆ ಅಗತ್ಯ -ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ, ಜೂ.5: ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಜೊತೆಗೆ ಅವರ ಆಸಕ್ತಿಯ ಅನುಸಾರ ಪರಿಸರ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗುವಂತೆ ಅಧ್ಯಾಪಕರು ಪ್ರೇರಣೆ ನೀಡಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ವೀ.ವಿ ಸಂಘದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ, ಪರಿಸರ ಉಳಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬಳ್ಳಾರಿಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ, ಹೀಗಾಗಿ ಮರಗಳನ್ನು ಬೆಳೆಸುವ ಪರಿಪಾಠ ಹೆಚ್ಚಾಗಬೇಕು ಎಂದು ಹೇಳಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇಂತಹ ಸಾಮಾಜಿಕ ಕಾಳಜಿಯ ಕೆಲಸಗಳಲ್ಲಿ ತೊಡಗಿಕೊಂಡರೆ ಅವರ ವ್ಯಕ್ತಿತ್ವವೂ ಕೂಡ ರೂಪುಗೊಳ್ಳುತ್ತದೆ ಎಂದರು.


ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದಿಂದಾಗಿ ಇಂದು ಈ ಅಪರೂಪದ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ನಾರಾ ಶರತ್ ರೆಡ್ಡಿ, ರತ್ನಬಾಬು, ಇರ್ಫಾನ್, ಟಿಲ್ಲು ಮೊದಲಾದವರ ವಿನೂತನ ಪ್ರಯತ್ನವನ್ನು ಶ್ಲಾಘಿಸಿದರು.
ಮಹಾನಗರ ಪಾಲಿಕೆಯ ಇಇ ಮಲ್ಲನಗೌಡ ಮಾತನಾಡಿ, ‘ಸಾಮಾಜಿಕ ಕಾಳಜಿಯಿಂದ ನಗರದಲ್ಲಿ ನೆಡಲಾದ ಮರ ಗಿಡಗಳಿಗೆ ನೀರು ಹಾಕಿ ಸಂರಕ್ಷಣೆ ಮಾಡಿ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯ ಕಾರ್ಯಕ್ರಮದ ನಂತರ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ರೂಪಿಸಿರುವ ಮಿಯಾವೊಕಿ ಫಾರೆಸ್ಟ್ ಮಾದರಿಯ ಒಂದು ಎಕರೆ ಜಾಗದಲ್ಲಿ ಹಸಿರು ತಾಣ (One Acre Oxygen) ನಿರ್ಮಿಸುವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಅರಣ್ಯಾಧಿಕಾರಿ ಶರಣಕುಮಾರ್, ಮಹಾನಗರ ಪಾಲಿಕೆಯ ಸದಸ್ಯ ನೂರ್ ಮೊಹಮ್ಮದ್, ಕಣೇಕಲ್ ಮಹಾಂತೇಶ್, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ, ಚಾನಾಳ್ ಶೇಖರ್, ಯಾಳ್ಪಿ ಪೊಂಪನಗೌಡ, ಚೋರನೂರು ಕೊಟ್ರಪ್ಪ, ಬಿಆರೆಲ್ ಸೀನಾ, ಪಲ್ಲೇದ ಪ್ರಭುಲಿಂಗ, ಕೋರಿ ವಿರೂಪಾಕ್ಷಪ್ಪ ಸೇರಿದಂತೆ ಹಲವರು ಇದ್ದರು.
—–