ಅನುದಿನ ಕವನ-೧೬೨೮, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ನೂರು ನಮನ ಅಪ್ಪ!

ನೂರು ನಮನ ಅಪ್ಪ!

ಅಪ್ಪ, ಇಂದಿನ ದಿನ ನಿನ್ನ ದಿನ
ಉಂಟು ಅಮ್ಮಂದೂ ಒಂದಿನ
ಅದೇ ಸ್ವಾತಂತ್ರ್ಯ ದಿನ, ಮತ್ತೇನೋ
ದಿನದಂತೆ ನಿಂಗೂ ಒಂದು ದಿನ
ಅದ್ಯಾಕೆ ಅಪ್ಪ ಹಾಗೆ ನಕ್ಕಿದ್ದು
ಓ ಅಲ್ಲೀವರಗೂ ನಾನಿರಲಿಲ್ವಾ ಅಂದ್ಯಾ

ಅಪ್ಪ ಇಷ್ಟೆ ನಂಗೆ ಗೊತ್ತಿರೋದು
ಅಮ್ಮ ಭೂಮಾತೆಯಾಳದವಳು
ಅವಳಿಗಿಲ್ಲದ ಅಂಚುಗಳನೆಲ್ಲ ಬಳಸಿ
ಹಬ್ಬಿ ನಿಂದ ಆ ನೀಲಿ ಬಾನು ನೀನು
ಅಲ್ಲೆಲ್ಲ ಹರಿದಾಡೊ ಶಬ್ದ ನಡುವಿನ ಗಾಳಿ
ನೀರು ಇದೆಲ್ಲವೂ ನೀನು ಅಮ್ಮ ಅಷ್ಟೆ

ಅಪ್ಪ ಇಷ್ಟೆ ನಂಗೆ ಗೊತ್ತಿರೋದು
ಬಾನಗಲದ ನೆರಳು ತೋಳಗಲಿಸಿ
ಭೂತಾಯೊಡಲ ಚಿಗುರು ಮೊಳಕೆಗೆ
ನೀರೆರೆದು ಪೋಷಿಸಿ ಬೆಳೆಸಿ ಕಾಯ್ವುದು
ಬಿಸಿಲು ಸುರಿವ ಆ ಅಂಗಳವೆ ಗೊತ್ತು
ತಂಪು ಸುರಿವ ಬೆಳದಿಂಗಳ ತಾವು

ಅಪ್ಪ ಇಷ್ಟೆ ನಂಗೆ ಗೊತ್ತಿರೋದು
ಚುಕ್ಕಿ ಚಂದಿರಗಾಸರೆ ಆ ನೀಲನಭ
ಹೊಳೆವ ಮಿಂಚು ಸಿಡಿವ ಸಿಡಿಲಿಗೂ
ಉಂಟು ಎಡೆ ಆ ಅಗಾಧ ಬಯಲಲಿ
ಹಗಲ ಬೆಳಕು ಕವಿವ ಕತ್ತಲು ಎಲ್ಲ
ಅದರದೊಂದೊಂದು ಮೊಗ ಅಷ್ಟೆ

ಅಪ್ಪ ಇಷ್ಟೆ ನಂಗೆ ಗೊತ್ತಿರೋದು
ಸರಿವ ಪ್ರತಿ ಗಳಿಗೆಗೆ ಉಂಟು ಒಂದು
ಅಳತೆಗೋಲು ಮುಗಿಲ ಕಂಗಳಲಿ
ಬಲ್ಲುದದೆಲ್ಲ ಅದ್ಯಾವಾಗ ಏನೆಂದು
ಅಂತೆಯೆ ಸೃಷ್ಟಿಯೆಲ್ಲ ಬಲು ನಿರಾಳ
ತಯಾರು ಅವಳು ಎದುರಿಸಲು ಎಲ್ಲ

ಅಪ್ಪ ಇಷ್ಟೆ ನಂಗೆ ಗೊತ್ತಿರೋದು
ಹೇಳು ನೀನೇ ಉಂಟಾ ಮತ್ತೇನು
ನೀನೇ ಅಲ್ವಾ ಅಷ್ಟೆತ್ತರದಿ ನಿಂದು
ಮೈಯೆಲ್ಲಾ ಕಣ್ಣಾಗಿ ನಿರುಕಿಸೋದು
ಮುನ್ನಡೆಸೊ ಜಗದೊಡೆಯನಂತೆ
ಅದ್ಯಾಕೆ ನಗು ಮತ್ತೆ, ನಗುತಿರು ಹಾಗೇ
ನಿನ್ನ ನಗುವಿಗೆ ನಮನ ಅಪ್ಪ ನೂರು ನಮನ!

-ಸರೋಜಿನಿ ಪಡಸಲಗಿ
ಬೆಂಗಳೂರು

Leave a Reply

Your email address will not be published. Required fields are marked *