ನಮ್ಮ ಕೂಡ್ಲಿಗಿ ನೇರಳೆ ಹಣ್ಣು ತಿಂದಿರಾ ? -ಸಿದ್ಧರಾಮ ಕೂಡ್ಲಿಗಿ

ಕಾಲೇಜಿನಿಂದ ಬಂದೊಡನೆ ’ನೀರಲಹಣ್ಣು ತೊಗೊಂಡಿದೀನಿ ತಿಂತೀರಾ ?’ ಎಂದು ಮನೆಯಾಕೆ ಕೇಳಿದೊಡನೆ ಬಾಯಲ್ಲಿ ನೀರು ಬಂತು. ನನಗೆ ಅಚ್ಚುಮೆಚ್ಚಿನ ಹಣ್ಣುಗಳಲ್ಲಿ ಇದೂ ಒಂದು. ನೀರಲ ಹಣ್ಣುಗಳನ್ನು ಒಂದು ಡಬ್ಬಿಯಲ್ಲಿ ಹಾಕಿ ಅವುಗಳೊಂದಿಗೆ ಒಂದಷ್ಟು ಹರಳು ಉಪ್ಪನ್ನೂ ಹಾಕಿ ಕುಲುಕಿಬಿಟ್ಟರೆ ತಿನ್ನಲು ರುಚಿಯಾದ ನೀರಲಹಣ್ಣು ಸಿದ್ಧ. ಉಪ್ಪು ಸವರಿದ ನೀರಲಹಣ್ಣನ್ನು ಬಾಯಲ್ಲಿರಿಸಿಕೊಂಡು ಮೆಲ್ಲಗೆ ಕಚ್ಚಿದರೆ ಬಾಯತುಂಬೆಲ್ಲ ನೀರಲಹಣ್ಣಿನ ಸ್ವಲ್ಪ ಒಗರು, ಸಿಹಿ, ಉಪ್ಪು ಸೇರಿ ಆಹಾ ! ಎಂಥ ಮಧುರ ಅನುಭವ. ಹಾಗೆಯೇ ಹಲ್ಲಿನಿಂದ ಗೀರಿ ಗೀರಿ ಬೀಜವನ್ನು ಸ್ವಚ್ಛಗೊಳಿಸುವವರೆಗೂ ನಾಲಗೆಗೆ ಕೆಲಸ. ನೀರಲಹಣ್ಣನ್ನು ತಿಂದವರಿಗೇ ಗೊತ್ತು ಅದರ ಸವಿ.

ಸ್ವಲ್ಪ ಒಗರು, ಸಿಹಿ ತುಂಬಿದ ಈ ಹಣ್ಣು ಹೆಸರಿಗೆ ತಕ್ಕಂತೆ ನೇರಳೆ ಬಣ್ಣ. ಬಣ್ಣದ ಗಾಢತೆ ನೋಡಿದರೂ ಸಾಕು ಯಾರಿಗಾದರೂ ಬಾಯಲ್ಲಿ ನೀರೂರದೇ ಇರದು. ಗಾಢ ನೀಲಿ ಹಣ್ಣನ್ನು ತಿಂದೊಡನೆ ನಾಲಗೆಯ ಮೇಲೆ ನೀಲಿ ಬಣ್ಣವೇ ಬರುತ್ತದೆ. ಅಷ್ಟು ಬಣ್ಣ ಇದರದ್ದು. ಆದರೆ ನೈಸರ್ಗಿಕವಾಗಿಯೂ, ಯಾವುದೇ ರಾಸಾಯನಿಕ ಗೊಬ್ಬರ, ಔಷಧಿ ಸಿಂಪರಣೆ ಇಲ್ಲದಿರುವುದರಿಂದಲು ಈ ಹಣ್ಣು ಆರೋಗ್ಯಕ್ಕೆ ತುಂಬಾ ಹಿತಕರ.

ಪ್ರತಿವರ್ಷ ಹಣ್ಣುಗಳ ಸೀಸನ್ ಇದು. ಆಯಾ ಸೀಸನ್ ಗೆ ತಕ್ಕಂತೆ ನಾವೂ ಸಹ ಹಣ್ಣುಗಳನ್ನು ಸಮೃದ್ಧವಾಗಿಯೇ ತಿನ್ನುತ್ತೇವೆ. ಈಗ ಪ್ರತಿದಿನವೂ ಮನೆಯ ಬಳಿ ನೀರಲ ಹಣ್ಣು ಬರುತ್ತವೆ. ಧಂಡಿಯಾಗಿ ಆಯಾ ಸೀಸನ್ ಗೆ ತಕ್ಕಂತೆ ಹಣ್ಣು ತಿಂದುಬಿಡುತ್ತೇವೆ.

ನಾವು ಚಿಕ್ಕವರಿದ್ದಾಗ ಶಾಲೆಯ ಬಳಿ ಪುಟ್ಟಿಯಲ್ಲಿ ಕಡುನೀಲಿ ಬಣ್ಣದ ಈ ನೀರಲಹಣ್ಣನ್ನು ಮಾರಲು ಹೆಣ್ಣುಮಕ್ಕಳು ಬರುತ್ತಿದ್ದರು. ಐದು ಪೈಸೆಯೋ ಹತ್ತು ಪೈಸೆಯೋ ಕೊಟ್ಟರೆ, ಒಂದು ಕೊಳವೆಯೊಳಗೆ ನೀರಲಹಣ್ಣುಗಳನ್ನೂ, ಉಪ್ಪನ್ನು ಹಾಕಿ ಕುಲುಕಿ ಒಂದು ಕಾಗದದಲ್ಲಿ ಹಾಕಿಕೊಡುತ್ತಿದ್ದರು. ಅದೆಂಥ ರುಚಿ, ಸವಿ.

ನೇರಳೇ ಹಣ್ಣಿನಲ್ಲಿ ಔಷಧೀಯ ಗುಣವಿದೆ, ಸಕ್ಕರೆ ಕಾಯಿಲೆಗೆ ಒಳ್ಳೆಯದು ಎಂದು ವೈದ್ಯರೂ ಹೇಳಿರುವುದರಿಂದಲೇ ಈಗ ನೇರಳೆ ಹಣ್ಣಿಗೆ ಇನ್ನಿಲ್ಲದ ಬೇಡಿಕೆ. ಇಲ್ಲದಿದ್ದಲ್ಲಿ ನೇರಳೆಹಣ್ಣಿಗೆ ಅಷ್ಟೊಂದು ಬೇಡಿಕೆಯಿರಲಿಲ್ಲ. ಕೇವಲ 20ರಿಂದ 30 ರೂ.ಗಳಿಗೆ ಕೆ.ಜಿಯಂತೆ ಕೊಡುತ್ತಿದ್ದರು. ಈಗ 200 ರೂ.ಗಳಿಗೂ ಮಿಕ್ಕು ಕೆ.ಜಿಯಂತೆ ಮಾರಾಟವಾಗುತ್ತಿದೆ. ಇದಕ್ಕೆಲ್ಲ ಕಾರಣ ವೈದ್ಯರು. ಇದೇ ರೀತಿಯಲ್ಲಿಯೇ ಉಳಿದ ಕಾಡುಹಣ್ಣುಗಳಿಗೂ ವೈದ್ಯರು ಹೇಳಿಬಿಟ್ಟರೆ ಅವುಗಳಿಗೂ ಬೇಡಿಕೆ ಹೆಚ್ಚಿದರೆ ಅಶ್ಚರ್ಯವೇನಿಲ್ಲ.

ಅಧರಕ್ಕೂ ಉದರಕ್ಕೂ ಸಿಹಿಯಾಗಿರುವ ನೇರಳೆಹಣ್ಣು ಜೂನ್ ತಿಂಗಳಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ಈಗ ನಮ್ಮ ಭಾಗದಲ್ಲಿ ಸಾಕಷ್ಟು ಹಣ್ಣು ದೊರೆಯುತ್ತಿದೆ.

ನಮ್ಮ ಕೂಡ್ಲಿಗಿ ತಾಲೂಕಿನ ಕಕ್ಕುಪ್ಪಿ, ಸೂಲದಹಳ್ಳಿಗಳಲ್ಲಿ ಹೇರಳವಾಗಿ ನೇರಳೆಹಣ್ಣುಗಳು ದೊರೆಯುತ್ತವೆ. ಇದರ ಹಿಂದೆ ಲಕ್ಷಾಂತರ ರೂ.ಗಳ ವಹಿವಾಟೂ ಇದೆ.

ಸುಮಾರು 30 ಮೀಟರ್‌ಗಳಷ್ಟು ಎತ್ತರ ಬೆಳೆಯುವ ನೇರಳೆಹಣ್ಣಿನ ಮರ ಸಿಜಿಗಿಯಮ್ ಕುಮಿನಿ ಎಂಬ ಸಸ್ಯವರ್ಗಕ್ಕೆ ಸೇರಿದುದು. ಈ ಮರ 100 ವರ್ಷಗಳವರೆಗೆ ಬಾಳುತ್ತದೆ. ಮೊದಲೆಲ್ಲ ರೈತರು ತಮ್ಮ ಹೊಲಗಳ ಬೇಲಿ ಸಾಲಿನಲ್ಲಿ ಇವುಗಳನ್ನು ಬೆಳೆಯುತ್ತ್ದಿದರು. ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿದೆ. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿದೆ. ಮಾರ್ಚ, ಎಪ್ರಿಲ್‌ನಲ್ಲಿ ನೇರಳೆಮರ ಹೂ ಬಿಡಲಾರಂಭಿಸುತ್ತದೆ. ನಂತರ ಹಸಿರು ಬಣ್ಣದ ಪುಟ್ಟಕಾಯಿಗಳು ಗೊಂಚಲು ಗೊಂಚಲಾಗಿ ಕಾಣಿಸಿಕೊಳ್ಳುತ್ತವೆ. ತಿಳಿಗುಲಾಬಿ ಬಣ್ಣಕ್ಕೆ ತಿರುಗುವ ಕಾಯಿಗಳು ಬೆಳೆದು ಹಣ್ಣಾಗತೊಡಗಿದಂತೆ ಗಾಢ ನೀಲ ಬಣ್ಣವನ್ನು ಹಾಗೂ ತೀವ್ರ ಹೊಳಪನ್ನು ಹೊಂದುತ್ತವೆ. ಮರದಲ್ಲಿಯೇ ಹಣ್ಣಾಗುವ ನೇರಳೆಹಣ್ಣುಗಳನ್ನು ಕೂಲಿಯಾಳುಗಳಿಂದ ಬಿಡಿಸಲಾಗುತ್ತದೆ.

ನಮ್ಮ ತಾಲೂಕಿನ ಕಕ್ಕುಪ್ಪಿಯೊಂದರ‍ಲ್ಲೇ ಸುಮಾರು 50 ಮರಗಳಿವೆ. ಜೂನ್ ತಿಂಗಳಾದ್ಯಂತ ಹಣ್ಣು ಕೊಡುವ ಒಂದು ಮರ ಒಟ್ಟು 2 ಕ್ವಿಂಟಾಲ್‌ನಷ್ಟು ಹಣ್ಣುಗಳನ್ನು ಕೊಡುತ್ತದೆ. ಪ್ರತಿದಿನವೂ 120-140 ಕೆ.ಜಿಯಷ್ಟು ಹಣ್ಣನ್ನು ಒಂದು ಮರ ಕೊಡುತ್ತದೆ. ಇತ್ತೀಚೆಗೆ ಮಳೆ ಕಡಿಮೆಯಾಗುತ್ತಿರುವುದರಿಂದ, ರೈತರು ಪರ್ಯಾಯ ಬೆಳೆಯಾಗಿ ನೇರಳೆಹಣ್ಣನ್ನು ಬೆಳೆಯಬಹುದಾಗಿದೆ.

ನೇರಳೆಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎಂದು ವೈದ್ಯರು ಹೇಳುತ್ತಾರೆ. ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮವಾದುದಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆಹಣ್ಣುಗಳನ್ನು ತಿಂದರೆ ಕಾಯಿಲೆಯನ್ನು ನಿಯಂತ್ರಿಸಬಹುದೆಂದು ವೈದ್ಯವಿಜ್ಞಾನ ತಿಳಿಸುತ್ತದೆ. ಸವಿ, ಒಗರು ರುಚಿಯನ್ನು ಹೊಂದಿರುವ ನೇರಳೆಹಣ್ಣನ್ನು ಉಪ್ಪಿನೊಂದಿಗೆ ತಿಂದರೆ ಬಲುರುಚಿ.

-ಸಿದ್ಧರಾಮ ಕೂಡ್ಲಿಗಿ,  ವಿಜಯನಗರ ಜಿಲ್ಲೆ.