ಅವಳು ಮಾತು ಮುಗಿಸುವುದಿಲ್ಲ…
ಅಂಗಳದ ಹಕ್ಕಿಗಳಿಗೆ ಕಾಳುಗಳನ್ನಿಟ್ಟು
ಮಾತಿಗೆಳೆಯುತ್ತಾಳೆ
ಹಕ್ಕಿ ಹಾರುವವರೆಗೆ ಮಾತು ಮುಂದುವರೆಯುತ್ತದೆ…
ಎದೆಯಂಗಳಕ್ಕೆ ಮಾತಿನ ಕಾಳುಗಳ
ತಡವಿಲ್ಲದೆ ಸರಾಗವಾಗಿ ಎಸೆಯುತ್ತಾಳೆ
ಗುಬ್ಬಚ್ಚಿ ಆಗಸಕ್ಕೆ ಹಾರಿ
ಕೊಕ್ಕಲ್ಲಿ ಸಿಕ್ಕಿಕೊಂಡ ಕಾಳುಗಳ
ತನ್ನ ಮರಿಗಳಿಗೆ ಗುಟುಕನಿಕ್ಕಲು ಜಿಗಿದು
ನೇರಾನೇರ ಹಾರಿ ಹೋಗುವ ಹಾಗೆ
ಮತ್ತದೇ ವರಸೆ ತೆಗೆದು ಕೋಳಿ ಜಗಳ ತೆಗೆದು
ಮಾತಿಗೆ ವಿರಾಮವಿಲ್ಲದೆ ಪಟಪಟನೆ ಒದರುತ್ತಾಳೆ…
ದೈತ್ಯ ವೃಕ್ಷದ ನೆರಳು
ಭುವಿಯ ಸುತ್ತಿಕೊಂಡ ಹಾಗೆ
ನನ್ನ ಸುತ್ತಲೇ ಗಿರಕಿ ಹೊಡೆದು
ಮದುಮಗಳ ಹಾಗೆ ಶೃಂಗಾರಗೊಂಡು
ಯಾವ ಸೋಗಿಲ್ಲದೆ ತನ್ಮಯಳಾಗಿ
ಹಕ್ಕಿ ತನ್ನ ಜಾಡು ಹಿಡಿದು
ಬಾನ ಹೆದ್ದಾರಿಯಲ್ಲಿ ಸಾಗುವ ಹಾಗೆ
ಉರಿ ಬಿಸಿಲು ಬಿಕೋ ಅನ್ನುವಾಗ
ಎದೆಗೆ ಕಣ್ಣಲ್ಲೆ ಗುಂಡು ಹೊಡೆದು
ಮೌನದಿ ಮಾತು ಮುಂದುವರೆಸುತ್ತಾಳೆ…
ಜೋತು ಬಿದ್ದು ಪದ್ಯಗಳ
ಉರು ಹೊಡೆಯುವಾಗಲೂ
ಬೇಕಂತಲೇ ತರಲೆ ಮಾಡಿ
ಅಹೋ ರಾತ್ರಿಗೆ ಸಿಳ್ಳೆ ಹೊಡೆದು
ಹುರುಳಿ ಜೋಳ ಹುರಿದಂಗೆ ಉರಿದು
ಮಾತಿಗೆ ವೇಗ ಹೆಚ್ಚಿಸುತ್ತಾಳೆ…
-ಸಿದ್ದು ಜನ್ನೂರ್, ಚಾಮರಾಜನಗರ
—–