Make sure when leaving the world,
Not just you were good,
but leave
A good world.
ನೀನು ಉತ್ತಮವಾಗಿದ್ದ ಬಗ್ಗೆ ಮಾತ್ರವಲ್ಲ,
ಉತ್ತಮಗೊಳಿಸಿ ಜಗತ್ತು ಬಿಡುವಂತೆ ಬದುಕು
ಕವಿ,ಬರ್ಟೋಲ್ಡ್ ಬ್ರೆಕ್ಟ್ ನ ಈ ಸಾಲುಗಳು ಅನಿಲ್ ಹೊಸಮನಿ ಎಂಬ ಸಂಘರ್ಷದ ಒಡನಾಡಿಯ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ನೆನಪಿಗೆ ಬಂದವು.
ಅನಿಲ್ ಹೊಸಮನಿ:ದಲಿತ ಹೋರಾಟಗಾರ, ಸಂಘಟಕ, ಬರೆಹಗಾರ, ಅನುವಾದಕ, ಪತ್ರಕರ್ತ, ಹೀಗೆ ಹತ್ತು ಹಲವು ಪಾತ್ರಗಳನ್ನು ನಿರ್ವಹಿಸುತ್ತಿರುವ ಎಪ್ಪತ್ತರ ಸನಿಹದಲ್ಲಿರುವ ಅನಿಲ್ ಹೊಸಮನಿಯವರ ಬಂಡಾಯ ಏಕಮುಖಿಯಾದುದಲ್ಲ. ಓದು ಮತ್ತು ಚಳವಳಿ ಎರಡನ್ನೂ ಸಮಾನವಾಗಿ ಸ್ವೀಕರಿಸಿದ ಶಿಕ್ಷಣ ಬಹುಮುಖವಾದಾಗ ಮಾತ್ರ ಬಂಡಾಯಕ್ಕೆ ಶಕ್ತಿ ಬರುತ್ತದೆ.
ಚಳವಳಿ ಎನ್ನೋದು ಜಡಗೊಂಡ ದೇಶಕ್ಕೆ ಚಿಕಿತ್ಸೆಯಾಗುತ್ತದೆ. ಆದರೆ ಕೆಲವೊಮ್ಮೆ ಈ ಚಳವಳಿಗಳು ಕೂಡ ಜಡಗೊಂಡಾಗ ವರ್ತಮಾನ ಕ್ರೂರವಾಗುತ್ತದೆ. ಫ್ಯಾಸಿಸ್ಟ್ ವಿರುದ್ಧ ಹೋರಾಡಿ, ಹೋರಾಡಿ, ಕೊನೆಗೊಂದು ದಿನ ತನ್ನದೇ ಫ್ಯಾಸಿಸ್ಟ ಗುಣ ಪಡೆಯುವ ಅಪಾಯವಿರುತ್ತದೆ. ಇಂತಹ ಅಪಾಯಗಳಿಗೆ ಸಿಲುಕದ ಹಾಗೆ ಮೇ ಸಾಹಿತ್ಯ ಮೇಳ ಬಳಗ ಬಯಲೊಳು ಬಯಲಾಗಿ ಕಾರ್ಯನಿರ್ವಹಿಸುತ್ತಿದೆ. ಅನಿಲ್ ಈ ಬಯಲಿನ ಅವಿಭಾಜ್ಯ ಅಂಗ. ಒಂದು ಕಾಲದಲ್ಲಿ, ಒಂದೇ ಒಂದು ಕರೆ ಕೊಟ್ಟರೆ ಸಾಕಿತ್ತು,ಸಾವಿರಾರು ದಲಿತರು ಸೇರುತ್ತಿದ್ದರು. ದ.ಸಂ.ಸ.ಧ್ವನಿ ದೂರದ ವಿಧಾನಸೌಧದವರೆಗೂ ಕೇಳಿಸುತ್ತಿತ್ತು.
ಭೂಮಿ ಮತ್ತು ದಲಿತರ ನಡುವಿನ ಪೋಷಕ ಸಂಬಂಧವನ್ನು ಭಾರತೀಯ ರಾಜಕಾರಣ, ಪ್ರಭುತ್ವಗಳು ಅರ್ಥ ಮಾಡಿಕೊಳ್ಳಲಿಲ್ಲ. ಭಾರತದ ಕ್ಷುದ್ರ ರಾಜಕಾರಣಕ್ಕೆ ಬಲಿಯಾದ ಚಳವಳಿಗೆ ಹಿನ್ನೆಡೆಯಾಯಿತು.
ದಲಿತರು, ಆಗಾಗ ಒಂದಾಗುತ್ತಾರೆ. ಅದೇ ವೇಗದಲ್ಲಿ ಒಡೆದು ಚೂರು ಚೂರಾಗ್ತಾರೆ. ಈ ಹೊತ್ತು ದಲಿತರ ಸಮಸ್ಯೆಗಳೂ ಕೂಡ ಹೆಚ್ಚು ಆಧುನಿಕೀಕರಣಗೊಂಡಿವೆ. ಹಿಂಸೆ ಕೂಡ.
ಕಳೆದ ತಿಂಗಳುಗಳ ಹಿಂದೆ ನಡೆದ ಕುಂಭಮೇಳದಲ್ಲಿ ಐವತ್ತು ಕೋಟಿ ಜನ ಪುಣ್ಯಸ್ನಾನ ಮಾಡಿದರೆಂದು ಸುದ್ದಿ ಬಿತ್ತರಿಸುವ ಮಾಧ್ಯಮಗಳಿಗೆ,ಇಷ್ಟು ಬೃಹತ್ ಪ್ರಮಾಣದ ಜನರ ಮಲವನ್ನು ಎತ್ತಿದವರಾರೆಂದು ಕೇಳುವುದಿಲ್ಲ. ದುರ್ಬಲಗೊಂಡ ಡಿ.ಎಸ್.ಎಸ್.ಕೂಡ ಕೇಳಲಿಲ್ಲ.
ಆದರೆ ಇಂದಿನ ಒಂದು ಸಂತೋಷದ ಸಂಗತಿಯೆಂದರೆ ವಿಭಜಿತ ಬಣಗಳ ಎಷ್ಟೋ ದಲಿತ ಮುಖಂಡರು ಇಂದು ಹಾಜರಿದ್ದರು. ಎಂದೋ ಜಗಳವಾಡಿ ದೂರವಾದ ಅಣ್ಣತಮ್ಮಂದಿರ ಹಾಗೆ ಮತ್ತೆ ಇಲ್ಲಿ ಕುಳಿತಿದ್ದರು.
ಡಿಎಸ್ಸೆಸ್ ಮತ್ತೆ ಹಿಂದಿನ ಚೈತನ್ಯಕ್ಕೆ ಮರಳುತ್ತಿದೆ ಎಂಬುದರ ಸೂಚನೆ ಇದು ಎಂದೇ ನಾನು ಭಾವಿಸಿದ್ದೇನೆ.
ಜು.14 ಭಾನುವಾರ ಮುಂಜಾನೆ ಹೋರಾಟಗಾರ ಚಂದ್ರಶೇಖರ ಹೊಸಮನಿ ಅವರ ನಾಲ್ಕನೇ ತಲೆಮಾರಿನ ಸುಕೀರ್ತನಿಂದ (ಅನಿಲ್ ಹೊಸಮನಿಯವರ ಮೊಮ್ಮಗ) ಮನೆ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಲವತ್ತು ವರುಷಗಳ ಕಾಲ ಒಬ್ಬ ದಲಿತ ಪದವೀಧರನಿಗೆ, ಪತ್ರಕರ್ತನಿಗೆ, ಚಳವಳಿಗಾರನಿಗೆ ಒಂದು ಸಣ್ಣ ಮನೆಕಟ್ಟಿಕೊಳ್ಳಾಕೂ ಆಗಲಿಲ್ಲ ಅಂದ್ರೆ , ಇದು ದುರಂತವಲ್ಲದೆ ಮತ್ತೇನು? ಅನಿಲ್ ಹೊಸಮನಿಯವರ ಹೋರಾಟ, ಚಳವಳಿಗಳ ಫಲಿತವನ್ನು ನಾವಿಂದು ಅನುಭವಿಸುತ್ತಿದ್ದೇವೆ.
ಮನೆಯ ಹೆಸರೇ “ಸಂವಿಧಾನ”. ಇದೊಂದು ರೂಪಕವಾಗಿದೆ. ಇದರ ನಿರ್ಮಾಣಕ್ಕೆ ಎಷ್ಟೊಂದು ಮನಸುಗಳು ಕೈಜೋಡಿಸಿವೆ ಎಂಬುದನ್ನು ನೆನೆಸಿಕೊಂಡರೆ ಮೇಲೆ ಹೇಳಿದ ಬ್ರೆಕ್ಟ್ ನ ಮಾತುಗಳಂತೆಯೇ ಇವೆ.
ಇದೇ ಮನೆಯ ಒಂದು ಪುಟ್ಟ ಹಾಲ್ ಅಂಬೇಡ್ಕರ್ ಪ್ರೆಸ್ ಆಗಿ ಕಾರ್ಯಾರಂಭ ಮಾಡಲಿದೆ. ಆ ಮೂಲಕ ಬಹುಜನ ನಾಯಕ ಮತ್ತೆ ಬರ್ತಾರೆ.
ಈ ಕಾಲದಲ್ಲಿ ಸಂವಿಧಾನ ಹೆಸರಿನ ಪುಟ್ಟ ಮನೆಯೊಂದನ್ನು ಚಳವಳಿಗಾರನಿಗೆ ಸಮಾನಮನಸ್ಕ ಗೆಳೆಯರೆಲ್ಲ ಸೇರಿ ಕಟ್ಟಿಸುವುದು, ಸಮೂಹದ ಒಂದು ಭಾಗ, ಮನುಷ್ಯ ಸಮುದಾಯದ ಜವಾಬ್ದಾರಿ ಕೂಡ ಹೌದು. ನಮ್ಮ ಮಾತು ಮತ್ತು ಕ್ರಿಯೆಗಳು ನಮ್ಮ ಸಮಕಾಲೀನರಿಗೆ ಅರ್ಥವಾಗುವಂತೆ ಇರಬೇಕು. ಹಾಗಾದಲ್ಲಿ ಮಾತ್ರ ಜನಪರ ಚಳವಳಿಗಳು ಗೆಲ್ಲುತ್ತವೆ. ಇಂತಹದೊಂದು ಅರ್ಥಪೂರ್ಣ ಮತ್ತು ಕಾಲದ ಅಗತ್ಯತೆಯ ಕಾರ್ಯಕ್ರಮವನ್ನು ಆಯೋಜಿಸಿದ ಮೇ ಬಳಗದ ಬಸೂ ಮತ್ತು ಗೆಳೆಯರ ಕಾರ್ಯ ಅನುಕರಣೀಯವಾದುದು.
ಚಳವಳಿಯಲ್ಲಿ ಧುಮುಕಿದವರು ಬಹಳ ಮಂದಿ ಇದ್ದಾರೆ. ಆದರೆ ಚಳುವಳಿಯನ್ನೇ ಒಂದು ‘ಪ್ರಾರ್ಥನೆ’ಯನ್ನಾಗಿ ಮಾಡಿಕೊಂಡ ಅನಿಲ್ ಹೊಸಮನಿಯಂತವರು ಸಿಗೋದು ಬಹಳ ಕಡಿಮೆ. ಈ ಹೋರಾಟಗಾರನ ನಾಲ್ಕು ದಶಕಗಳ ಹೋರಾಟದ ಆಳದಲ್ಲಿ ಸಾಂಸ್ಕೃತಿಕ ಹುಡುಕಾಟಗಳಿವೆ. ಜನರ ಬದುಕನ್ನು ಕಟ್ಟುವ ಕ್ರಿಯೆಗಳಿವೆ. ಈ ದಿನದ ಕಾರ್ಯಕ್ರಮ ಅರ್ಥಪೂರ್ಣ ಅಷ್ಟೇ ಅಲ್ಲ, ಚಳವಳಿಗಳನ್ನು ಜನರ ಬಳಿಗೆ ಒಯ್ಯುವ, ಮುಟ್ಟಿಸುವ, ತೆರೆದುಕೊಳ್ಳುವ ಮನಸ್ಸುಗಳನ್ನು ಸೃಷ್ಟಿಸುವ ಕೆಲಸ ಮಾಡಿದೆ.
ಚಳವಳಿಗಾರ ಯಾವತ್ತೂ ಕೂಡ ಇಂಜಿನಿಯರ್, ಕೃಷಿತಜ್ಞ, ಬುದ್ದಿಜೀವಿ, ಅಧಿಕಾರಿಗಳಿಗಿಂತಲೂ ಶ್ರಮಜೀವಿ. ಬಸ್ಟ್ಯಾಂಡಿನಲ್ಲಿ ಒಂದು ಪುಟ್ಟ ಬಾಕ್ಸ್ ಇಟ್ಟು, *ನಿಮ್ಮ,ನಿಮ್ಮ ದೂರುಗಳನ್ನು, ಕಷ್ಟಗಳನ್ನು ಈ ಪೆಟ್ಟಿಗೆಯಲ್ಲಿ ಬರೆದು ಹಾಕಿರಿ*
-ಅನಿಲ ಹೊಸಮನಿ.
ಹೀಗೆ ಬರೆದಿಟ್ಟು ಸಂಜೆ ಹೊತ್ತಿನಲ್ಲಿ ಆ ಪುಟ್ಟ ಪೆಟ್ಟಿಗೆಯ ಪತ್ರಗಳನ್ನು ಹರಡಿಕೊಂಡು ವರದಿ ಮಾಡುವ ಯಾವ ಪತ್ರಕರ್ತ ತಾನೆ ಈ ಹೊತ್ತಿನ ಮಾಧ್ಯಮದಲ್ಲಿದ್ದಾನೆ? ಅನಿಲ್ ಹೊಸಮನಿ ಎಂಬ ಹೊರನೋಟಕ್ಕೆ ಮೌನಿಯಂತೆ ಕಾಣುವ ಇವರು, ಮತ್ತು ಇವರ ಬಾಕ್ಸ್ ಈ ಹೊತ್ತಿಗೆ ಮೆಟಫರ್ ನಂತೆ ಕಾಣಿಸುತ್ತಿದೆ.
ಒಟ್ಟಾರೆ, ಅನಿಲ ಹೊಸಮನಿ ಎಂಬ ಸಂಘರ್ಷದ ಒಡನಾಡಿಯ ಜೊತೆಗಿನ ಈ ದಿನ, ಸಾರ್ವಜನಿಕ ನೈತಿಕತೆಗೊಂದು ನಿದರ್ಶನದಂತಿತ್ತು. ಡಿಎಸ್ಸೆಸ್ ಇಬ್ಭಾಗವಾಗಿದ್ದಾಗ ಖುಷಿಯಿಂದ ವರದಿ ಮಾಡಿದ್ದ ವೃತ್ತಪತ್ರಿಕೆಗಳು, ಯಾವುದೇ ಛಲವಂತ, ಪ್ರಾಮಾಣಿಕ, ಪಾರದರ್ಶಕ ಗುಂಪು ಎಂದಿಗೂ ಇಬ್ಭಾಗವಾಗುವುದಿಲ್ಲ , ನೈಜ ಹೋರಾಟಗಳು ಎಂದಿಗೂ ಸಾಯುವುದಿಲ್ಲ ಎಂಬುದನ್ನು ಮೇ ಸಾಹಿತ್ಯ ಬಳಗ ಕೂಗಿ ಕೂಗಿ ಹೇಳಿದಂತಿತ್ತು.
– ಬಿ.ಶ್ರೀನಿವಾಸ, ಸಾಹಿತಿ, ದಾವಣಗೆರೆ
—–