ಬಿದಿರಿನ ಕಳೆ
ಸುಂದರವಾಗಿ ಬಿದಿರಿದು ಬೆಳೆದಿದೆ
ರಂಗು ರಂಗಾಗಿ ಕಂಗಳ ಸೆಳೆದಿದೆ
ತಿಂಗಳ ಬೆಳಕಲಿ ಚಂದದಿ ಹೊಳೆದಿದೆ
ಮಂಗಳ ಕಾರ್ಯಕೆ ಜೊತೆಯಾ ನೀಡಿದೆ.
ಕೊಳಲಾಗುತಲಿ ಅಧರವ ಕರೆದಿದೆ
ಬುಟ್ಟಿಯಾಗುತ ಸೊoಟದಿ ಕುಳಿತಿದೆ
ಮೊರವಾಗುತಲಿ ಕರದಲಿ ಮಿoಚಿದೆ
ತೊಟ್ಟಿಲಾಗುತ ಮಗುವನು ರಮಿಸಿದೆ.
ಪ್ರಕೃತಿಗೆ ನಲಿಯುತ ಸ್ಪರ್ಧೆಯ ನೀಡಿದೆ
ನೇತ್ರಗಳಿಗೆ ಚೆಲು ವರ್ಣವ ಊಡಿದೆ
ಎದೆ ಎದೆಗಳಿಗೆ ಹರ್ಷವ ತೀಡಿದೆ
ಮತ್ತೇನು ಬೇಡದೆ ಬದುಕಲಿ ಕೂಡಿದೆ.
ಹಸಿರಿದು ಜೀವದ ಉಸಿರೇ ಅಲ್ಲವೆ
ಹೆಸರನು ಉಳಿಸುವ ತ್ರಾಣವೆ ಇಲ್ಲಿದೆ
ಮನಸಿಗೆ ಸಂತಸದ ಓಕುಳಿಯೆರಚಿದೆ
ಬದುಕಲಿ ನನ್ನoತಾಗಿರಿ ಎಂದಿದೆ.
-ಪಿ. ಕಾತ್ಯಾಯಿನಿ, ಕೊಳ್ಳೇಗಾಲ