ಕೆಯುಡಬ್ಲೂಜೆ ‘ಪತ್ರಕರ್ತ’ ಸಂಚಿಕೆಯನ್ನು ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು, ಜು.30: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ) ಹೊರ ತರುವ ಪತ್ರಕರ್ತ ವಿಶೇಷ ಸಂಚಿಕೆಯನ್ನು ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು.

ರಾಜ್ಯ ಸಂಘದ ಚಟುವಟಿಕೆ, ತುಮಕೂರಿನಲ್ಲಿ ನಡೆದ ರಾಜ್ಯ ಸಮ್ಮೇಳನದ ಮಾಹಿತಿ, ಕೊಪ್ಪಳದಲ್ಲಿ ನಡೆದ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ, ಮಲೆ ಮಹದೇಶ್ವರದಲ್ಲಿ ನಡೆದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರ ಅಭಿನಂದನಾ ಸಮಾರಂಭ, ಕ್ರೀಡಾ ಚಟುವಟಿಕೆ, ಮನೆಯಂಗಳದಲ್ಲಿ ಹಿರಿಯ ಪತ್ರಕರ್ತರಿಗೆ ನಮನ, ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಮಗ್ರ ಮಾಹಿತಿಯನ್ನು ಈ ಸಂಚಿಕೆ ಒಳಗೊಂಡಿದೆ ಎಂದು ಕೆಯುಡಬ್ಲೂೃಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಜು.1ರಂದು ನಡೆದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ ಜಾರಿಗೆ ನೀಡಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕೆಯುಡಬ್ಲೂಜೆ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಮತ್ತಿತರರು ಇದ್ದರು.

 

ಮೊದಲ ಸಂಚಿಕೆ ಅರ್ಪಣೆ: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಮೊದಲ ಸಂಚಿಕೆಯನ್ನು ವಿಧಾನಸೌಧದ ಅವರ ಕಚೇರಿಯಲ್ಲಿ ಕೆಯುಡಬ್ಲೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಅವರು ಅರ್ಪಿಸಿದರು.