ಬೆಳಕ ಮಾತುಗಳು…
ಅವ್ವ ಮೊನ್ನೆ ನಿಧನಳಾದಳು
ಏನು ಹೊತ್ತುಕೊಂಡು ಹೋಗಲಿಲ್ಲ
ಒಳ್ಳೆಯತನವೊಂದನ್ನು ಬಿಟ್ಟು
ಅಪ್ಪ ಮೂರು ವರ್ಷಗಳ ಹಿಂದೆ ನಿಧನನಾದ
ಏನು ಹೊತ್ತುಕೊಂಡು ಹೋಗಲಿಲ್ಲ
ಮಕ್ಕಳ ಸಾಧನೆಗಳೊಂದಷ್ಟನ್ನು ಬಿಟ್ಟು
ಅಪ್ಪ ಉಪ್ಪಿಗು
ಕಷ್ಟ ಪಟ್ಟಿದ್ದ ಕಂಡೆ
ಅವ್ವ ಪಾವು ಹಾಲನ್ನು
ಕಡ ತಂದಿದ್ದ ಕಂಡೆ
ಅಪ್ಪ ಹೊತ್ತುಕೊಂಡು ಹೋಗಲಿಲ್ಲ
ಕಷ್ಟವ
ಅವ್ವ ಹೊತ್ತುಕೊಂಡು ಹೋಗಲಿಲ್ಲ
ಹಾಲಿನ ಸಾಲವ
ಮಕ್ಕಳ ಭವ್ಯ ಮನೆಯ ಮುಂದೆ
ಬೆರಳಿಟ್ಟು ಕೂತ ಅಪ್ಪ
ಮಕ್ಕಳು ಮಾಡಿಸಿದ ಎರಡೆಳೆ ಕಾಸಿನ ಸರವನ್ನು ಸಂಭ್ರಮಿಸಿದ್ದ ಅವ್ವ
ಇಲ್ಲಿ ಯಾವುದು
ಶಾಶ್ವತವಲ್ಲ
ನಾನು ನೀನು
ಕಷ್ಟ ಸುಖ
ಉಳಿದ ಶೂನ್ಯವನ್ನೊರತುಪಡಿಸಿ
ಒಳ್ಳೆಯತನದ ಬೆಳಕ
ಮಾತುಗಳನ್ನೊರತುಪಡಿಸಿ…
-ರಹೊಬ(ರಘೋತ್ತಮ ಹೊ ಬ), ಮೈಸೂರು