ಅನುದಿನ ಕವನ-೧೬೭೫, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಸ್ಕೆಚ್: ಸಿದ್ಧರಾಮ ಕೂಡ್ಲಿಗಿ

ಒಲವಿನ ಬೆಳಕಿನಲಿ ಕಂಬನಿ ಮಿಡಿದ ಮೇಲಲ್ಲವೆ ಮಳೆಬಿಲ್ಲು ಮೂಡುವುದು ಗೆಳತಿ
ನೆಲದೆದೆಯ ಪ್ರೀತಿಯ ಪಿಸುಮಾತ ಕೇಳಿದ ಮೇಲಲ್ಲವೆ ಹಸಿರು ಚಿಗುರುವುದು ಗೆಳತಿ

ತೀರದ ಕರೆಗೆ ಓಗೊಡುತ ಪ್ರತಿಕ್ಷಣವೂ ಮುತ್ತಿಕ್ಕುತಿವೆ ಅಲೆಗಳು ಎಷ್ಟೋ ಯುಗಗಳಿಂದ
ಕಡಲ ನೋವಿನ ಭೋರ್ಗರೆತ ಅರಿತ ಮೇಲಲ್ಲವೆ ಒಡಲ ಮುತ್ತು ಅರಳುವುದು ಗೆಳತಿ

ಗಾಳಿಯಲೆಯ ಬೆನ್ನೇರಿ ಪ್ರೀತಿಯ ಧಾರೆಯ ಸುರಿಯಲೆಂದೆ ಅಲೆಯುತಿವೆ ಮೋಡಗಳು
ಕುದಿವ ಎದೆಯ ಭಾವಗಳ ಸುರಿದ ಮೇಲಲ್ಲವೆ ಧರೆಯೆಲ್ಲ ನಾಚಿ ನೀರಾಗುವುದು ಗೆಳತಿ

ಕನಸುಗಳಿಗೆ ರೆಕ್ಕೆ ಮೂಡಿದಂತೆ ಒಲುಮೆಯ ಹೂಗಳನರಸಿ ತೇಲುತಿವೆ ಬಣ್ಣದ ಚಿಟ್ಟೆಗಳು
ಪ್ರೇಮದ ಮಧುರತೆಯ ಅರಿತ ಮೇಲಲ್ಲವೆ ಮನಸು ಮಾಗಿ ತನಿರಸವಾಗುವುದು ಗೆಳತಿ

ಕಾಲಚಕ್ರ ಓಡುತಲೇ ಇದೆ ಇದ್ದುದು ಇರದುದನೆಲ್ಲ ತನ್ನ ಸುಳಿಯ ತೆಕ್ಕೆಯಲಿ ಸೆಳೆಯುತ
ಸಿದ್ಧ ತನ್ನನ್ನು ತಾನು ಅರಿತ ಮೇಲಲ್ಲವೆ ಬಯಲು ನಿರ್ಬಯಲಾಗಿ ಬೆಳಕಾಗುವುದು ಗೆಳತಿ

-ಸಿದ್ಧರಾಮ ಕೂಡ್ಲಿಗಿ