ಬಳ್ಳಾರಿ, ಆ. 10:ಕವಿಯಾದವನಿಗೆ ಜನಸಾಮಾನ್ಯರ ಕಷ್ಟಕ್ಕೆ ಮಿಡಿಯುವ ಮನಸ್ಸಿರಬೇಕು, ಎಷ್ಟೆ ರಾಗ ದ್ವೇಷಗಳಿದ್ದರೂ ಮಾನವೀಯತೆಯ ಬಲೆ ನಮ್ಮನ್ನು ಸುತ್ತುವರೆದಿರುತ್ತದೆ ಎಂದು ಹಿರಿಯ ಕವಯತ್ರಿ ಸವಿತಾ ನಾಗಭೂಷಣ ಅವರು ತಿಳಿಸಿದರು. ಅವರು ಭಾನುವಾರ ನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಬಿ.ಪಿ.ಎಸ್.ಸಿ ಕಾಲೇಜು ಸಭಾಂಗಣದಲ್ಲಿ ಲೋಹಿಯಾ ಪ್ರಕಾಶನ ಮತ್ತು ಬೆಂಗಳೂರಿನ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಜರುಗಿದ ಕತೆಗಾರ ಡಾ.ರಾಜಶೇಖರ ನೀರಮಾನ್ವಿ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಘಮಲು ಮತ್ತು ಸೌಂದರ್ಯವಿದೆ. ಕನ್ನಡ ಸಾಹಿತ್ಯದಲ್ಲಿ ಅತ್ಯುತ್ತಮವಾದ ಕತೆಗಳು ಕಾದಂಬರಿಗಳು ರಚಿತವಾಗಿವೆ, ವಿಶ್ವ ಸಾಹಿತ್ಯ ಲೋಕಕ್ಕೆ ಸಡ್ಡು ಹೊಡೆಯುವಂತ ಸಾಹಿತ್ಯ ಕನ್ನಡ ಸಾಹಿತ್ಯ ಲೋಕದಲ್ಲಿದೆ ಎಂದು ಶ್ಲಾಘಿಸಿದರು. ನಮ್ಮನ್ನು ನಾವು ಕಂಡುಕೊಳ್ಳುವಂತ ವಸ್ತು ನೀರಮಾನ್ವಿಯವರ ಕತೆಗಳಲ್ಲಿ ಕಾಣಬಹುದು ಎಂದು ಹೇಳಿದರು. ಗಾಜಾಪಟ್ಟಿಯ ಜನರ ಕಷ್ಟಕ್ಕೆ ಸ್ಪಂದಿಸದ ಪ್ರತಿಕ್ರಿಯಿಸದ ಸಾಹಿತಿ ಮತ್ತು ಸಾಹಿತ್ಯ ಡಂಬಾಚಾರವಾಗುತ್ತದೆ, ಕನ್ನಡಿಯೊಳಗಿನ ಬಿಂಬ ಕೂಡ ನಮ್ಮದಲ್ಲ ಎನ್ನುವಷ್ಟು ವಿಶ್ಲೇಷಣೆಯಿರಬೇಕು ಎಂದು ಅಭಿಪ್ರಾಯಪಟ್ಟರು.
ಡಾ. ರಾಮಣ್ಣ ಮತ್ತು ಡಾ. ನೀರಮಾನ್ವಿ ಅವರನ್ನು ಓದಿಕೊಂಡಿದ್ದೇನೆ ಆದರೂ ನನಗೆ ಕತೆಗಳು ಬರೆಯಲು ಆಗಲಿಲ್ಲ ನಾನೊಬ್ಬ ವಿಫಲ ಕತೆಗಾರ್ತಿ ಎಂದು ತಿಳಿಸಿದರು. ಏನೇ ಬರೆಯಬೇಕೆಂದರೂ ಮೊದಲು ಓದಬೇಕು, ಹಂಗಿನ ಅರಮನೆಯನ್ನು ನಾನು ಬಾಲ್ಯದಲ್ಲಿ ಓದಿದ್ದೆ ಆಗ ಅದನ್ನು ಪ್ರೇಮಕತೆಯಾಗಿ ಓದಿದ್ದೆ, ಆದರೆ ಈಗ ಓದಿದಾಗ ಅದರ ಅರ್ಥವೇ ಬೇರೆಯಾಗುತ್ತದೆ, ಡಾ. ನೀರಮಾನ್ವಿಯವರ ಕತೆಗಳು ಲೌಕಿಕ ಬದುಕಿಗೆ ಅತ್ಯಂತ ಹತ್ತಿರ ಎನಿಸುತ್ತದೆ ಎಂದರು. ಕವಿಯಾದವನು ವಿಶ್ವ ಸಾಹಿತ್ಯವನ್ನು ತಿಳಿದಿರಬೇಕು. ಆಗ ಮಾತ್ರ ಸಾಹಿತ್ಯ ಸಹವಾಸದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯವಾಗುತ್ತದೆ, ಬೆಳಕಿನ ವೇಗಕ್ಕಿಂತ ಮನಸ್ಸಿನ ವೇಗ ಜಾಸ್ತಿ ಅದನ್ನು ನಾವು ನೀರಮಾನ್ವಿಯವರ ಕತೆಗಳಲ್ಲಿ ಕಾಣಬಹುದು ಎಂದು ವಿಶ್ಲೇಷಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ ಅವರು, ಡಾ. ನೀರಮಾನ್ವಿ ಅವರು ನಮ್ಮನ್ನಗಲಿದ್ದಾರೆ ಎಂದು ಹೇಳಲು ನಾನು ಬಯಸುವುದಿಲ್ಲ ಅವರು ಪ್ರತಿಯೊಬ್ಬ ಸಾಹಿತ್ಯಾಸಕ್ತರ ಉಸಿರಿನಲ್ಲಿ ಬಿಸಿಯಾಗಿದ್ದಾರೆ ಆದವಾನಿ ವೀರಭದ್ರ, ಡಾ. ಬೆಸಗರಹಳ್ಳಿ ರಾಮಣ್ಣ ಮತ್ತು ಡಾ. ರಾಜಶೇಖರ್ ನೀರಮಾನ್ವಿ ಅವರ ಕೃತಿಗಳನ್ನು ನಮ್ಮ ಪ್ರಕಾಶನದಿಂದ ಹೊರತರಲಾಗಿದೆ. ಅಸಲಿಗೆ ಲೋಹಿಯಾ ಪ್ರಕಾಶನ ಹುಟ್ಟಿದ್ದೆ ಒಂದು ರೋಚಕತೆ. ಕಾಫಿಬಟ್ಟಲಿನ ಹೊಗೆಯಲ್ಲಿ ಅರಳಿದ ಪ್ರಕಾಶನ ನಮ್ಮದು ಎಂದು ಸ್ಮರಿಸಿದರು. ಡಾ. ನೀರಮಾನ್ವಿ ಅವರ ಹಂಗಿನ ಅರಮನೆ ಕತೆಯನ್ನು ಬಸು ಚಟರ್ಜಿಯವರು ತಮ್ಮ ಕಥಾ ಮಾಲಿಕೆಯಲ್ಲಿ ಆಯ್ದುಕೊಂಡಿದ್ದೆ ಹೆಮ್ಮೆಯ ವಿಷಯ ಎಂದರು. ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ 25 ಪ್ರಶಸ್ತಿಗಳಲ್ಲಿ ಸುಮಾರು 17ರಿಂದ 18 ಪ್ರಶಸ್ತಿಗಳು ನಮ್ಮ ಕಲ್ಯಾಣ ಕರ್ನಾಟಕದ ಸಾಹಿತಿಗಳ ಪಾಲಾಗಿವೆ ಎಂದರೆ ನಮ್ಮಲ್ಲಿ ಹೆಚ್ಚು ಶ್ರೇಷ್ಠ ಕತೆಗಾರರಿದ್ದಾರೆನ್ನುವುದು ತಿಳಿಯಬಹುದು ಎಂದು ಹರ್ಷ ವ್ಯಕ್ತಪಡಿಸಿದರು.
ಬೆಳಗಿನ ಮಾತುಕತೆಯಲ್ಲಿ ಡಾ.ರಾಜೇಂದ್ರ ಚೆನ್ನಿ , ಡಾ.ಪಿ ಭಾರತಿದೇವಿ, ಮದ್ಯಾಹ್ನದ ಮಾತುಕತೆಯಲ್ಲಿ ಡಾ.ಅಮರೇಶ್ ನುಗಡೋಣಿ, ಡಾ.ಚಿದಾನಂದಸಾಲಿ ತಮ್ಮ ವಿಚಾರಗಳನ್ನು ಮಂಡಿಸಿದರು.
ಸಂಜೆ ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಬೆಂಗಳೂರಿನ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಎಚ್ ಆರ್ ಸುಜಾತಾ ಮಾತನಾಡಿದರು. ವೇದಿಕೆಯಲ್ಲಿ ನೀರಮಾನ್ವಿ ಅವರ ಧರ್ಮಪತ್ನಿ ಸರ್ವಮಂಗಳ ನೀರಮಾನ್ವಿ, ಬಿ.ಪಿ.ಎಸ್.ಸಿ ಶಾಲೆಯ ಡಾ.ಮಹಿಪಾಲ್ ಇದ್ದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಪೂರ್ವವಲಯದ ಐಜಿಪಿ, ಡಾ. ಬೆಸಗರಹಳ್ಳಿ ರಾಮಣ್ಣ ಅವರ ಪುತ್ರ ಡಾ. ರವಿಕಾಂತೇಗೌಡ, ವಾರ್ತಾ ಇಲಾಖೆಯ ವಿಶ್ರಾಂತ ನಿರ್ದೇಶಕ ವಿಶುಕುಮಾರ್, ಅರಿವು ಸಂಘಟನೆಯ ಎಸ್.ಪನ್ನರಾಜ್, ಲೇಖಕ ಡಾ. ತಿಪ್ಪೇರುದ್ರ, ಹಿರಿಯ ಸಾಹಿತಿಗಳಾದ ಡಾ. ವೆಂಕಟಯ್ಯ ಅಪ್ಪಗೆರೆ, ಟಿ.ಕೆ. ಗಂಗಾಧರ ಪತ್ತಾರ್, ಡಾ.ಎನ್.ಸಿದ್ದೇಶ್ವರಿ, ಮೋಕಾ ಭುವನೇಶ್, ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ, ಕತೆಗಾರ ವೆಂಕಟೇಶ್ ಉಪ್ಪಾರ, ಚಿತ್ರ ಕಲಾವಿದ ಮಂಜುನಾಥ ಗೋವಿಂದವಾಡ, ಸಾಹಿತಿಗಳಾದ ವೀರೇಂದ್ರ ರಾವಿಹಾಳ್, ಸುಧಾ ಚಿ. ಗೌಡ, ಸಿದ್ಧರಾಮ ಕಲ್ಮಠ, ಡಾ.ಅರವಿಂದ್ ಪಟೇಲ್, ಬಾದಾಮಿ ಶಿವಲಿಂಗ, ಚೋರನೂರು ಕೊಟ್ರಪ್ಪ ಸೇರಿದಂತೆ ಹಲವಾರು ಸಾಹಿತ್ಯಾಭಿಮಾನಿಗಳಿದ್ದರು.
ಸಾಹಿತಿ ಡಾ. ದಸ್ತಗೀರ್ ಸಾಬ್ ದಿನ್ನಿ ನಿರೂಪಿಸಿದರು, ಗಾಯಕ ಜಡೇಶ್ ಎಮ್ಮಿಗನೂರು ಪ್ರಾರ್ಥಿಸಿದರು, ಡಾ. ಶಿವಲಿಂಗಪ್ಪ ಹಂದಿಹಾಳ್ ವಂದಿಸಿದರು. ಅಜಯ ಬಣಕಾರ್, ಡಾ.ನಾಗರಾಜ ಬಸರಕೋಡು, ಕಪ್ಪಗಲ್ಲು ಪ್ರಭು ನಿರ್ವಹಿಸಿದರು.
—–